ಕಾರ್ಯಕರ್ತರ ವಿರೋಧ : ಸಚಿವ ಬೈರತಿ ಸುರೇಶ್ ಗೆ ಆಳ್ವರ ಮನೆಯಲ್ಲಿ ಆಯೋಜಿಸಿದ್ದ ಉಪಹಾರ ಕೂಟ ರದ್ದು

ಮಂಗಳೂರು: ಇಂದು ನಗರಕ್ಕೆ ಆಗಮಿಸಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಆಳ್ವ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಬೆಳಗ್ಗಿನ ಉಪಾಹಾರ ಕೂಟವನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಭಾರೀ ಅಸಮಾಧಾನದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ್ದು, ಅವರಿಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಆಳ್ವ ಅವರ ನಿವಾಸದಲ್ಲಿ ಬೆಳಗ್ಗಿನ ಉಪಾಹಾರ ಕೂಟವನ್ನು ಏರ್ಪಡಿಸಲಾಗಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಅವರ ಉಮೇದುವಾರಿಕೆ ಸಲ್ಲಿಸುವಾಗಲೂ ಜೊತೆಯಾಗಿದ್ದ ಮೋಹನ್ ಆಳ್ವರ ನಿವಾಸದಲ್ಲಿ ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಕಾರ್ಯಕರ್ತರು ತಮ್ಮ ಅಸಮಾಧಾನ ಹೇಳಿಕೊಂಡಿದ್ದರು. ಈ ಬಗ್ಗೆ ಮುಲ್ಕಿ ಮೂಡುಬಿದಿರೆ ಕಾಂಗ್ರೆಸ್ ಕಾರ್ಯಕರ್ತರು ಹಾಗು ಸ್ಥಳೀಯ ನಾಯಕರ ವಲಯದಲ್ಲಿ ನಿನ್ನೆಯಿಂದ ಭಾರೀ ಚರ್ಚೆ ನಡೆದಿತ್ತು. ಚುನಾವಣೆಯಲ್ಲಿ ನೇರವಾಗಿ ಬಿಜೆಪಿಯನ್ನು ಬೆಂಬಲಿಸಿದವರ ಮನೆಗೆ ಸಚಿವರು ಹೋಗುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಬಿಜೆಪಿ ಬೆಂಬಲಿಗರ ನಿವಾಸದಲ್ಲಿ ಉಪಹಾರ ಕೂಟ ಏರ್ಪಡಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಕೈ ಕಾರ್ಯಕರ್ತರು ಪಕ್ಷದ ಮುಖಂಡರಲ್ಲಿ ಅಸಾಮಾಧಾನ ಹೇಳಿಕೊಂಡಿದ್ದರು. ಜೊತೆಗೆ ಸಚಿವರ ಕಾರ್ಯಕ್ರಮದಲ್ಲಿ ಭಾಗವಹಿಸದೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತರಾತುರಿಯಲ್ಲಿ ಮೋಹನ್ ಆಳ್ವ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಾಹಾರ ಕೂಟವನ್ನು ರದ್ದುಗೊಳಿಸಿರುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದೆ ಎಂದು ತಿಳಿದು ಬಂದಿದೆ.







