ಉಪ್ಪಿನಂಗಡಿ | ಆನ್‌ಲೈನ್‌ನಲ್ಲಿ ಪಾವತಿಸಿದ ಹಣ ಕಣ್ತಪ್ಪಿನಿಂದ ಇನ್ನೊಬ್ಬರ ಖಾತೆಗೆ : ಹಣ ಹಿಂದಿರುಗಿಸದವನ ಮೇಲೆ ದೂರು

ಉಪ್ಪಿನಂಗಡಿ, ಡಿ.10: ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತನ್ನ ಸಂಬಂಧಿಕರಿಗೆ ತುರ್ತು ಅಗತ್ಯದ ನೆಲೆಯಲ್ಲಿ ಪೋನ್ ಪೇ ಮೂಲಕ ಕಳುಹಿಸಲಾದ ಹಣ ಕಣ್ತಪ್ಪಿನಿಂದಾಗಿ ಇನ್ನೊಬ್ಬರ ಖಾತೆಗೆ ಹೋದ ಪ್ರಕರಣದಲ್ಲಿ ಹಣ ಮರುಪಾವತಿಸಲು ನಿರಾಕರಿಸಿದ ಉಜಿರೆಯ ಉದ್ಯಮಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿಯ ಮಠ ಎಂಬಲ್ಲಿ ಗ್ರಾನೈಟ್ ಉದ್ಯಮ ನಡೆಸಿಕೊಂಡಿರುವ ಹರಿರಾವ್ ಎಂಬವರು ದೂರು ನೀಡಿದ್ದು, ತನ್ನ ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಎಂಬವರಿಗೆ ಕಳುಹಿಸಬೇಕಾದ 19,000 ರೂ. ಕಣ್ತಪ್ಪಿನಿಂದಾಗಿ ಉಜಿರೆಯ ಉದ್ಯಮಿಯೋರ್ವರ ಖಾತೆಗೆ ವರ್ಗಾವಣೆಗೊಂಡಿದ್ದು, ಈ ಮೊತ್ತದಲ್ಲಿ 10,000 ರೂ. ವನ್ನು ಹಿಂದಿರುಗಿಸಿ ಉಳಿದ ಮೊತ್ತವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





