ಮುಲ್ಕಿ| ಹಾಜಿ ಸೈಯದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 13 ಮನೆಗಳ ಹಸ್ತಾಂತರ, 10 ಮನೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

ಮುಲ್ಕಿ: ಹಾಜಿ ಕೆ.ಎಸ್. ಸೈಯದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡವರಿಗಾಗಿ ನಿರ್ಮಿಸಿರುವ ನೂತನ 13 ಮನೆಗಳ ಹಸ್ತಾಂತರ ಮತ್ತು ನೂತನ 10 ಮನೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮವು ಹಾಜಿ ಕೆ.ಎಸ್. ಸೈಯದ್ ಕಾಂಪೌಂಡ್ ನಲ್ಲಿ ಮಂಗಳವಾರ ನಡೆಯಿತು.
ಕರ್ನಿರೆ ಜುಮಾ ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ ಕಾರ್ತಕ್ರಮ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಜಿ ಕೆ.ಎಸ್. ಸೈಯದ್ ಕರ್ನಿರೆ, ತಂದೆಯವರಾದ ಸೈಯದ್ ಅವರ ಮನಸ್ಸು ಬಡವರಿಗಾಗಿ ತುಡಿಯುತ್ತಿತ್ತು. ಅವರ ಕಾಲದಲ್ಲೇ ಸಮಾಜ ಮುಖಿ ಕೆಲಸಗಳು ನಡೆಸುತ್ತಿದ್ದರು. ಅವರ ಕಾಲನಂತರ ಅವರ ಮಕ್ಕಳದ ನಾವು ಅವರ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡು ಅವರ ಕೆಲಸಗಳನ್ನು ಮುಂದುವರಿಸಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರವೂ ಮಾಡದ ಕೆಲಸವನ್ನು ಕೆ.ಎಸ್. ಸೈಯದ್ ಅವರ ಮಕ್ಕಳು ಮಾಡುತ್ತಿದ್ದಾರೆ. ಟ್ರಸ್ಟ್ ನ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ತಾಯಿ ತಂದೆಯಿಂದ ಸಿಕ್ಕಿರುವ ತರಬೇತಿಯ ಫಲವಾಗಿ ಸೈಯದ್ ಅವರ ಮಕ್ಕಳು ಸಮಾಜಮುಖಿ ಕಾರ್ಯ ಗಳನ್ನು ಮಾಡಲು ಸಾಧ್ಯ. ಎಕ್ಸ್‌ಪರ್ಟೈಸ್ ಸಮಾಜಕ್ಕೆ ಬಾರಿ ದೊಡ್ಡ ಕೊಡುಗೆಗಳನ್ನು ನೀಡಿದೆ ಎಂದ ಅವರು, ಸೈಯದ್ ಕುಟುಂಬ ಅಂತರ್ ರಾಷ್ಟೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಮನೆಗಳ ನಿರ್ಮಾಣದಲ್ಲಿ ಸಹಕರಿಸಿದ್ದ ಹುಸೈನ್ ಅಬ್ಬಾಸ್, ಅಬ್ದುಲ್ ಜಲೀಲ್ ಎಂ.ಎಚ್., ಉಮೇಶ್ ಪೂಜಾರಿ, ರಮೇಶ್ ಕೋಟ್ಯಾನ್, ಇಕ್ಬಾಲ್ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಕೀರ್ತಿ ತಂದ ಸಾದಕಿ ಶರ್ಮೀನ್ ಫರಾ ಅವರನ್ನು ಸನ್ಮಾನಿಸಿ ಗೌರವಿಸಿದರು.
ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, ಕೆ.ಎಸ್. ಸೈಯದ್ ಅವರು ಸುಮಾರು 38 ಮನೆಗಳನ್ನು ಈಗಾಗಲೇ ನಿರ್ಮಿಸಿಕೊಟ್ಟಿದ್ದಾರೆ. ಅವರ ಮಕ್ಕಳು ಇನ್ನೂ 10 ಮನೆಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಿದರು. ಎಕ್ಸ್‌ಪರ್ಟೈಸ್ ಕೇವಲ ಉದ್ದಿಮೆಯಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಎಕ್ಸ್‌ಪರ್ಟೈಸ್ ಗಳು ಎಂದ ಅವರು, ಸೈಯದ್ ಹಾಜಿ ಅವರೊಂದಿಗಿನ ಒಡನಾಟಗಳನ್ನು ಹಂಚಿಕೊಂಡರು.
ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಕೆ. ಹರೀಶ್ ಕುಮಾರ್ ಅವರು ಮಾತನಾಡಿ, ಬಡವರನ್ನು ಪ್ರೀತಿಸು ಎಂಬುವುದು ದೇವರ ಮಾತು. ಅದರಂತೆ ಸೈಯದ್ ಹಾಜಿ ಅವರು ಮತ್ತು ಅವರ ಮಕ್ಕಳು ದೇವರ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಸಂಪತ್ತನ್ನು ಬಡವರಿಗೆ ವಿನಿಯೋಗಿಸುವ ಮನಸ್ಸು ಇರಬೇಕು. ಅದು ಕರ್ನಿರೆ ಕುಟುಂಬಕ್ಕೆ ಭಗವಂತ ನೀಡಿದ್ದಾನೆ. ಈ ಸಮಾಜಿಕ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಶುಭಹಾರೈಸಿದರು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೊ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಸ್ಥಳೀಯರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಸೇಕುಂಞಿ ಜೋಕಟ್ಟೆ, ಸೈಯದ್ ಅಲಿ, ಮಾಜಿ ಶಾಸಕ ಮೊಯ್ದಿನ್ ಬಾವ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜಾ, ಗ್ರಾ.ಪಂ. ಸದಸ್ಯರಾದ ವನಜಾ ಕೋಟ್ಯಾನ್, ಗಾಯತ್ರಿ ಶೆಟ್ಟಿ, ಕರ್ನಿರೆ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ, ಅಬ್ದುಲ್ ಜಲೀಲ್ ಕೃಷ್ಣಾಪುರ, ಟ್ರಸ್ಟಿಗಳು ಹಾಗೂ ಹಾಜಿ ಕೆ.ಎಸ್. ಸೈಯದ್ ಕರ್ನಿರೆ ಅವರ ಪುತ್ರರಾದ ಅಬ್ದುಲ್ ರಹ್ಮಾನ್, ಮುಹಮ್ಮದ್ ಆಸೀಫ್, ಮುಹಮ್ಮದ್ ಅಶ್ಫಾಕ್, ಮುಹಮ್ಮದ ಅಶ್ರಫ್, ಮುಹಮ್ಮದ್ ಅನ್ಶಿಫ್ ಮೊದಲಾದವರು ಉಪಸ್ಥಿತರಿದ್ದರು.
ಹಾಜಿ ಸೈಯದ್ ಹಾಜಿ ಅವರ ಮೊಮ್ಮಗ ಆಯಿಶ್ ಕಿರಾಅತ್ ಪಠಿಸಿದರು. ಸೈಯದ್ ಹಾಜಿ ಅವರ ಮಗ ಹಾಗೂ ಟ್ರಸ್ಟಿ ಅಶ್ರಫ್ ಸ್ವಾಗತಿಸಿದರು.







