ಸಚಿವ ಮಂಕಾಳ ವೈದ್ಯರ ವಜಾಕ್ಕೆ ಮುಸ್ಲಿಂ ಲೀಗ್ ಆಗ್ರಹ

ಮಂಗಳೂರು: ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಅವರನ್ನು ರಾಜ್ಯ ಸರ್ಕಾರ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯದ ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಅವರು ಉತ್ತರಕನ್ನಡ ಜಿಲ್ಲೆಯ ಗೋಕಳ್ಳತನವನ್ನು ಪ್ರಸ್ತಾಪಿಸಿ ಸರ್ಕಲ್ ಬಳಿ ನಿಲ್ಲಿಸಿ ಗುಂಡೇಟು ಹಾಕಬೇಕೆಂದು ಕರೆಯೊಂದನ್ನು ನೀಡಿದ್ದು , ಇದು ಪ್ರಚೋದನಕಾರಿ ಹಾಗು ಸಂವಿಧಾನ ವಿರೋಧಿಯೂ ಆಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರ ಬೇಜವಾಬ್ದಾರಿ ಪ್ರಸ್ತಾವನೆ ನ್ಯಾಯಬದ್ಧ ಗೋಸಾಗಟದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಜಿಲ್ಲಾ ಮುಸ್ಲಿಂ ಲೀಗ್ ಆರೋಪಿಸಿದೆ.
ಸಚಿವರ ಈ ಹೇಳಿಕೆಯಿಂದ ಅನಾಹುತ ಉಂಟಾಗುವ ಸಾಧ್ಯತೆ ಇದೆ. ಈ ಹಿಂದೆ ಆಗುಂಬೆ (ಚೆಕ್ ಪೋಸ್ಟ್) ಸಾರಿಗೆ ತಪಾಸಣಾ ಕೇಂದ್ರದಲ್ಲಿ ದಾಖಲೆ ಸಮೇತ ಗೋಸಾಗಾಟ ಮಾಡಿಯೂ ಶೂಟೌಟ್ ಪ್ರಕರಣವೊಂದರಲ್ಲಿ ಯುವಕ ಬಲಿಯಾಗಿದ್ದಾನೆ ಎಂದು ತಿಳಿಸಿದೆ.
ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ಸಿ ಅಬ್ದುಲ್ ರೆಹ್ಮಾನ್ ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ ಜಿಲ್ಲಾ ಉಪಾಧ್ಯಕ್ಷ ಎಚ್ ಮೊಹಮ್ಮದ್ ಇಸ್ಮಾಯಿಲ್ ಜಿಲ್ಲಾ ಮುಖಂಡ ಹಾಜಿ ಅಬ್ದುಲ್ ರಹಮಾನ್ ಕಂದಕ್ ಎಚ್ ಕೆ ಕುಂಞಿ, ಅಬೂಬಕ್ಕರ್ ಸಿದ್ದಿಕ್, ಶಬೀರ್ ಬಂದರ್ ಮೊದಲಾದವರು ಉಪಸ್ಥಿತರಿದ್ದರು







