“ನನ್ನ ಮಗಳು ಧೈರ್ಯವಂತೆ, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ”: ಪಂಜಾಬ್ ನಲ್ಲಿ ಮೃತಪಟ್ಟ ಆಕಾಂಕ್ಷಾ ತಾಯಿ
“13 ವರ್ಷಗಳಾದರೂ ಸೌಜನ್ಯಾಳಿಗೆ ನ್ಯಾಯ ಸಿಕ್ಕಿಲ್ಲ, ಹೀಗಿರುವಾಗ ನಮ್ಮ ಮಗಳಿಗೆ ನ್ಯಾಯ ಸಿಗಬಹುದಾ?”

ಬೆಳ್ತಂಗಡಿ: ನನ್ನ ಮಗಳು ಧೈರ್ಯವಂತೆ. ಎಷ್ಟಾದರೂ ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ ಎಂದು ಇತ್ತೀಚೆಗೆ ಪಂಜಾಬ್ ನಲ್ಲಿ ಮೃತಪಟ್ಟ ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ ತಾಯಿ ಸಿಂಧೂ ದೇವಿ ಹೇಳಿದ್ದಾರೆ.
ಪಂಜಾಬ್ ನಿಂದ ಮರಳುವ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗಳು ಉದ್ಯೋಗಕ್ಕೆ ಸೇರಿ 6 ತಿಂಗಳಾಗಿತ್ತು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದ್ದಳು. ಆಗ ನಾನು ಸ್ವಲ್ಪ ಆರ್ಥಿಕ ಸಮಸ್ಯೆಯಿರುವುದಾಗಿ ತಿಳಿಸಿದ್ದೆ. ಬಳಿಕ ಮುಂದಿನ ವಾರ ಪರೀಕ್ಷೆ ಫೀಸು ಪಾವತಿಸಬೇಕಿತ್ತು, ಮೊಬೈಲ್ ಹಾಳಾಗಿದ್ದರಿಂದ ಹೊಸ ಮೊಬೈಲ್ ಖರೀದಿಸಬೇಕೆಂದು ತಿಳಿಸಿದಾಗ ಹಣ ಕಳಿಸುವುದಾಗಿ ಹೇಳಿದ್ದೆ ಎಂದರು.
ಈ ಮಧ್ಯೆ ಆಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಜರ್ಮನಿಗೆ ತೆರಳಬೇಕಿದ್ದರಿಂದ ಅಗತ್ಯ ದಾಖಲೆ ಪಡೆಯಲು ಪಂಜಾಬ್ ಗೆ ಹೋಗಬೇಕಿದೆ. ಒಬ್ಬ ಅಧ್ಯಾಪಕನ ಹೊರತು ಉಳಿದವರು ಸರ್ಟಿಫಿಕೇಟ್ ಕಳಿಸಿದ್ದಾರೆ. ಆ ಅಧ್ಯಾಪಕ ಅಲ್ಲೇ ಹೋಗಿ ಪಡೆಯಬೇಕೆಂದು ಒತ್ತಾಯಿಸಿದ್ದರಿಂದ ಪಂಜಾಬ್ ಗೆ ಹೋಗುವುದಾಗಿ ತಿಳಿಸಿದ್ದಳು. ಗುರುವಾರ ಸಂಜೆ ಹೊರಟವಳು ಶುಕ್ರವಾರ ಬೆಳಿಗ್ಗೆ ಪಂಜಾಬ್ ತಲುಪಿರುವುದಾಗಿ ಮೆಸೇಜ್ ಮಾಡಿದ್ದಳು. ಶುಕ್ರವಾರ ರಾತ್ರಿ ಕರೆ ಮಾಡಿದಾಗ ಅಧ್ಯಾಪಕ ಸರ್ಟಿಫಿಕೇಟ್ ನೀಡಿಲ್ಲ. ಈಗ ಗೆಳತಿಯ ರೂಂನಲ್ಲಿದ್ದೇನೆ. ಮರುದಿನ ಬರುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಳು. ಮರುದಿನ ಬೆಳಿಗ್ಗೆ ಮೆಸೇಜ್ ಮಾಡಿದಾಗ ಕಾಲೇಜಿನಲ್ಲಿರುವುದಾಗಿ ತಿಳಿಸಿದ್ದಳು ಎಂದರು.
ಆದರೆ ಮಧ್ಯಾಹ್ನ ವೇಳೆಗೆ ಅಪರಿಚಿತ ನಂಬರ್ ನಿಂದ ಕರೆ ಮಾಡಿದ ವ್ಯಕ್ತಿ ಆಕಾಂಕ್ಷಾ ಆತ್ಮಹತ್ಯೆ ಮಾಡಿದ್ದಾಗಿ ಹೇಳಿದರು. ವಂಚನಾ ಜಾಲದವರ ಕರೆ ಎಂದು ಭಾವಿಸಿದ ನಾನು ಆಕಾಂಕ್ಷಾ ನನ್ನ ಬಳಿ ಮಲಗಿದ್ದಾಳೆ ಅಂತ ಹೇಳಿ ಫೋನ್ ಕಟ್ ಮಾಡಿದೆ. ಕೂಡಲೇ ನೆರೆಹೊರೆಯವರನ್ನು ಕರೆದು ವಿಷಯ ತಿಳಿಸಿದೆ. ನಂತರ ನನ್ನ ಗಂಡನ ಮೊಬೈಲ್ ನಿಂದ ಅದೇ ನಂಬರ್ ಗೆ ಫೋನ್ ಮಾಡಿದಾಗ ಮಾತನಾಡಿದ ಪಂಜಾಬ್ ಪೊಲೀಸರು ಮಗಳು ಆತ್ಮಹತ್ಯೆ ಮಾಡಿರುವುದನ್ನು ಖಚಿತಪಡಿಸಿದರು ಎಂದು ತಿಳಿಸಿದರು.
ನಾವು ಕುಟುಂಬ ಸಮೇತ ಪಂಜಾಬ್ ಗೆ ತೆರಳಿ ಅಲ್ಲಿನ ಪೊಲೀಸರ ಜೊತೆ ಮಾತನಾಡಿದೆವು. ಆ ವೇಳೆಗಾಗಲೇ ಪೊಲೀಸರು ಎಫ್ ಐ ಆರ್ ಆಗದಂತೆ ಕೇಸನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಸುಳ್ಳು ಪುರಾವೆಗಳನ್ನು ಸೃಷ್ಟಿಸಿ, ಆಕಾಂಕ್ಷಾಳಿಗೆ ಅಲ್ಲಿನ ವಿವಾಹಿತ ಅಧ್ಯಾಪಕರೊಬ್ಬರ ಬಳಿ ಪ್ರೇಮಾಂಕುರವಾಗಿತ್ತು ಎಂದಿದ್ದಾರೆ. ನನಗನಿಸುವಂತೆ ಅಧ್ಯಾಪಕರೇ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿಕೊಂಡು ಅವರ ರೂಂ ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಏನೋ ಅಚಾತುರ್ಯ ನಡೆದಿದೆ. ಹಾಗಾಗಿ ನನ್ನ ಮಗಳು ಈ ರೀತಿ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಕೇಸ್ ಮುಚ್ಚಿ ಹಾಕಲು ಪೊಲೀಸರಿಗೆ ಹಣದ ಆಮಿಷವೊಡ್ಡಲಾಗಿದೆ. ಇದೇ ರೀತಿ ಹಲವು ಸಾವಿನ ಪ್ರಕರಣಗಳು ನಡೆದಿವೆ ಎಂಬ ಮಾಹಿತಿ ಸಿಕ್ಕಿದೆ. ಎಫ್ಐಆರ್ ನಲ್ಲಿ ಪಂಜಾಬಿ ಭಾಷೆಯಲ್ಲಿ ಬರೆದಿದ್ದರು. ಆದರೆ ನಮ್ಮಲ್ಲಿ “ಮರಣೋತ್ತರ ಪರೀಕ್ಷೆಗಾಗಿ ರಿಪೋರ್ಟ್ ತಯಾರಿಸಿದ್ದೇವೆ. ಅಧ್ಯಾಪಕನ ವಿರುದ್ಧ ಆಮೇಲೆ ಪ್ರಕರಣ ದಾಖಲಿಸುತ್ತೇವೆ” ಅಂತ ಹೇಳಿದರು. ನಮ್ಮಲ್ಲಿ ಅದನ್ನು ಓದಿಯೂ ಹೇಳಲಿಲ್ಲ. ಮೃತದೇಹವನ್ನು ಬೇಗ ಊರಿಗೆ ತಲುಪಿಸಬೇಕಾದ್ದರಿಂದ ನಾವು ಅದಕ್ಕೆ ವಿಶ್ವಾಸದಿಂದ ಸಹಿ ಹಾಕಿದ್ದೇವೆ. ಆದರೆ ಪೊಲೀಸರು ಈಗ ಅದನ್ನಿಟ್ಟುಕೊಂಡು ಆಟವಾಡುತ್ತಿದ್ದಾರೆ ಎಂದರು.
ಕಳೆದ ಮೂರು ವರ್ಷಗಳಿಂದ ಮಗಳು ಅಲ್ಲೇ ಕಲಿಯುತ್ತಿದ್ದಳು. ಆ ವೇಳೆ ಇದೇ ರೀತಿ ಹಲವು ವಿದ್ಯಾರ್ಥಿಗಳು ಮಹಡಿ ಮೇಲಿನಿಂದ ಬಿದ್ದ ಸಾವಿನ ಪ್ರಕರಣಗಳು ನಡೆದಿವೆ. ಈ ವಿಚಾರವನ್ನು ಅಲ್ಲಿನ ಪೊಲೀಸರೇ ತಿಳಿಸಿದ್ದಾರೆ. ಕಾಲೇಜು ಕಟ್ಟಡವು ಸ್ಥಳೀಯ ರಾಜಕಾರಣಿಯೊಬ್ಬರ ಒಡೆತನದಲ್ಲಿದೆ. ಹಾಗಾಗಿ ರಾಜಕೀಯ ಪ್ರಭಾವದಿಂದ ಪ್ರಕರಣಗಳನ್ನು ಅಲ್ಲೇ ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕ ಪೊಲೀಸರೂ ಪಂಜಾಬ್ ಪೊಲೀಸರೂ ಎಲ್ಲರೂ ಒಂದೇ. ನಮ್ಮ ಕಾಲ ಬುಡದಲ್ಲೇ ಅತ್ಯಾಚಾರ, ಕೊಲೆಯಾಗಿ 13 ವರ್ಷಗಳಾದರೂ ಸೌಜನ್ಯಾಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹೀಗಿರುವಾಗ ಪಂಜಾಬ್ ನಲ್ಲಿ ಮೃತಪಟ್ಟಿರುವ ನಮ್ಮ ಮಗಳಿಗೆ ನ್ಯಾಯ ಸಿಗಬಹುದಾ?" ಎಂದು ಬೇಸರ ವ್ಯಕ್ತಪಡಿಸಿದರು.







