ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ- ಕರ್ನಾಟಕ: ಎರಡನೇ ದಿನ ದೋಣಿಯಲ್ಲಿ ಹರೇಕಳಕ್ಕೆ ಪಯಣ

ಮಂಗಳೂರು: ‘ಪತ್ತೆಪ್ಪೆ ಜೋಕುಲು ಒಂಜಿ ಮಟ್ಟೆಲ್ಡ್ ’-ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ- ಕರ್ನಾಟಕ ಇದರ ಎರಡನೇ ದಿನದ ಪಯಣ ತುಳುನಾಡಿನ ವೀರರಾಗಿದ್ದ ಕೋಟಿ-ಚೆನ್ನಯರಿಗೆ ಸಮರ್ಪಿತವಾಗಿರುವ, ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಿತ್ಯ ಪೂಜೆಯು ಸಲ್ಲುತ್ತಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಮಹಾನ್ ಚೇತನಗಳಿಗೆ ಗೌರವಾರ್ಪಣೆ ಮಾಡುವ ಮೂಲಕ ಆರಂಭಗೊಂಡಿತು.
ಇದೇ ವೇಳೆ ಹಾಡು, ವಾಣಿ ಪೆರಿಯೋಡಿ ಅವರಿಂದ ಗಾಂಧಿ ಕಥನ ನಡೆಯಿತು. ಶ್ರೀವೈದ್ಯನಾಥ ದೇವಸ್ಥಾನ ಜಪ್ಪಿನಮೊಗರು ಕಂರ್ಬಿಸ್ಥಾನ, 1950-60ರ ದಶಕಗಳಲ್ಲಿ ರೈತ ಕಾರ್ಮಿಕ ಚಳವಳಿಗಳ ಮುಂಚೊಣಿ ನಾಯಕರ ಕರ್ಮಭೂಮಿಯಲ್ಲಿ ಗೌರವಾರ್ಪಣೆ, ಹಾಡು, ನುಡಿಮನ ಅರ್ಪಿಸಲಾಯಿತು.
ಮಂಗಳೂರಿನ ಸಾಮಾಜಿಕ, ಸಾಂಸ್ಕೃತಿಕ , ಆರ್ಥಿಕ, ರಾಜಕೀಯ ರಂಗಳಿಗೆ ಅನನ್ಯ ಕೊಡುಗೆಗಳನ್ನು ನೀಡಿದ್ದ ಅನ್ನದಾತ ದಿ.ಜೆ.ರಾಮಪ್ಪ ಅವರಿಗೆ, ಸ್ಮಾರಕಕ್ಕೆ ತೆರಳಿ ಗೌರವಾರ್ಪಣೆ ಮಾಡಲಾಯಿತು.
ತೆನೆಹಬ್ಬಕ್ಕೆ ಉಚಿತ ತೆನೆ ವಿತರಿಸುವ ಕೃಷಿಕ ಹರ್ಬರ್ಟ್ ಡಿ ಸೋಜ ಅವರೊಂದಿಗೆ ಸಂವಾದ ಬಳಿಕ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕ ಹರೇಕಳಕ್ಕೆ ಪಯಣ ಮುಂದುವರಿಯಿತು.
ಹರೇಕಳದಲ್ಲಿ ಗ್ರಾಮೀಣ ಆರ್ಥಿಕತೆ, ಸಬಲೀಕರಣ,ಸಹಬಾಳ್ವೆಗಳ ಪ್ರತೀಕ ಮೈಮೂನಾರ ಹೈನೋದ್ಯಮದ ಸಾಧನೆಯ ಸಂವಾದದೊಂದಿಗೆ ಎರಡನೇ ದಿನದ ಯಾತ್ರೆ ಸಮಾಪ್ತಿಗೊಂಡಿತು.







