ಉಳ್ಳಾಲ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರಿನದ್ದೇ ಚರ್ಚೆ

ಉಳ್ಳಾಲ: ಕುಡಿಯುವ ನೀರು, ಪೈಪ್ ಲೈನ್ ಕಾಮಗಾರಿ ನಡೆಸಿ ಸಮಗ್ರ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಗರಸಭೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದರು
ಉಳ್ಳಾಲ ನಗರ ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಕುಡಿಯುವ ನೀರಿನ ಸಮಸ್ಯೆ ಗೆ ಏನು ಪರಿಹಾರ ಮಾಡಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಅವರು ಪೌರಾಯುಕ್ತ ರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ವಾಣಿ ಆಳ್ವ ಅವರು, ಉಳ್ಳಾಲ ನಗರ ಸಭೆಯ 31 ವಾರ್ಡ್ಗಳ ಪೈಕಿ 11ವಾರ್ಡ್ ಗಳಿಗೆ ಮನಪಾ ಮೂಲಕ 1.5 ಎಂಎಲ್ ಟಿ ನೀರು ಸರಬರಾಜು ಆಗುತ್ತಿದೆ. ಉಳಿದ 20 ವಾರ್ಡ್ ಗಳಿಗೆ ನೀರು ಸರಬರಾಜು ಮಾಡಲು 110 ಕೋಳವೆ ಬಾವಿ ಹಾಗೂ 10 ಬಾವಿ ವ್ಯವಸ್ಥೆ ಇದೆ. ಪ್ರತಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಮಾರ್ಚ್ ತಿಂಗಳ ಬಳಿಕ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೌನ್ಸಿಲರ್ ದಿನಕರ್ ಉಳ್ಳಾಲ ಅವರು, ನಗರ ಸಭೆಯಲ್ಲಿ 15000 ನೀರು ಸಂಪರ್ಕ ಇದೆ. ಇದರಲ್ಲಿ ನಗರ ಸಭೆಗೆ ಬರುವುದು ಕೇವಲ 4500 ರೂ. ಆದಾಯ. ಬಹಳಷ್ಟು ನೀರಿನ ಸಂಪರ್ಕ ಅನಧಿಕೃತ ವಾಗಿ ಇದೆ. ನನ್ನ ವಾರ್ಡ್ ಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ.100 ಅನಧಿಕೃತ ಸಂಪರ್ಕ ಇದೆ. ದಾರಿದೀಪ ಇಲ್ಲ. ಯಾವುದೇ ಅಧಿಕಾರಿ ಗಳು ಬರುತ್ತಿಲ್ಲ. ನೀರು ಬಿಡುವುದರಲ್ಲೂ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಕೌನ್ಸಿಲರ್ ಮುಕಚೇರಿ ಅವರು ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ತಿಂಗಳು ಸಲಹಾ ಸಮಿತಿ ಸಭೆ ಕರೆದು ಮಾಹಿತಿ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಪ್ರತಿ ತಿಂಗಳು ಸಭೆನಡೆಸಿ ಸಮಸ್ಯೆ ಗೆ ಪರಿಹಾರ ಕಂಡು ಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಕಾಮಗಾರಿ ಗೆ ಅನುದಾನ ಸಮಾನವಾಗಿ ನೀಡುವ ಜೊತೆಗೆ ಕಸ ವಿಲೇವಾರಿಗೆ ಜಾಗದ ವ್ಯವಸ್ಥೆ ಮಾಡುವ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ಜೊತೆ ಚರ್ಚಿಸಿ ಒಂದು ಅಭಿಪ್ರಾಯಕ್ಕೆ ಬರಲಾಗುವುದು ಎಂದು ತಿಳಿಸಿದರು.
ಟ್ರೇಡ್ ಲೈಸೆನ್ಸ್ ಮತ್ತು ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ತೆರಿಗೆ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿ, 124 ಮಳಿಗೆಗಳಿಗೆ ಪರವಾನಿಗೆ ನೀಡಿದೆ. ಈ ತಿಂಗಳ ಡಿಸೆಂಬರ್ ಗೆ 11 ಮಳಿಗೆ ಯ ಟ್ರೇಡ್ ಲೈಸನ್ಸ್ ಅವಧಿ ಮುಗಿಯುತ್ತದೆ. 83 ಮಳಿಗೆಯ ಬಾಡಿಗೆ ಪಾವತಿ ಆಗಿದೆ. 50 ಲಕ್ಷ ಬಾಡಿಗೆ ಬರಲು ಬಾಕಿ ಇದೆ. ಅವಧಿ ಮುಗಿದ ಟ್ರೇಡ್ ಲೈಸನ್ಸ್ ಹೊಂದಿದ ಅಂಗಡಿಯನ್ನು ತಿಂಗಳ ಅಂತ್ಯದಲ್ಲಿ ಏಲಂ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಅವಧಿ ಮುಗಿದ ಟ್ರೇಡ್ ಲೈಸನ್ಸ್ ನವೀಕರಣ ಮಾಡದಿದ್ದಲ್ಲಿ ಮೂರು ತಿಂಗಳ ಮೊದಲೇ ನೊಟೀಸ್ ನೀಡಿ ಮರು ಏಲಂ ಮಾಡುವ ವ್ಯವಸ್ಥೆ ಮಾಡಬೇಕು. ಬಾಡಿಗೆ ಪಾವತಿ ಮಾಡದ ಮಳಿಗೆಗಳಿಗೂ ಇದೇ ರೀತಿ ಕ್ರಮ ಆಗಬೇಕು. ಟ್ರೇಡ್ ಲೈಸನ್ಸ್ ಸರಿಯಾಗಿ ನೀಡಬೇಕು. ಬಾಡಿಗೆ ವಸೂಲಿ ಆಗದಿದ್ದಲ್ಲಿ ಅದಕ್ಕೆ ನಗರಸಭೆ ಅಧಿಕಾರಿಗಳೇ ಹೊಣೆ ಎಂದರು.
ಕಸ ವಿಲೇವಾರಿ ಮಾಡುವ ವಾಹನದ ವಿಡಿಯೋ ವೈರಲ್ ಆದ ಬಗ್ಗೆ ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು. ಈ ಸಂದರ್ಭ ಮಾತನಾಡಿದ ಪೌರಾಯುಕ್ತ ವಾಣಿ ಆಳ್ವ, ಪೌರ ಕಾರ್ಮಿಕರು ವಾಹನದ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತರಲಿಲ್ಲ. ವಾಹನ 14 ವರ್ಷ ಹಳೆಯದ್ದು. ಈ ಸಮಸ್ಯೆಗೆ ಪರಿಹಾರ ಮಾಡುವ ದೃಷ್ಟಿಯಿಂದ ಹಳೇವಾಹನ ಕೊಟ್ಟು ಹೊಸ ವಾಹನ ಖರೀದಿ ಮಾಡಬೇಕಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಈ ಸಮಸ್ಯೆ ಬಗ್ಗೆ ಮೊದಲೇ ನನಗೆ ಹೇಳಬೇಕಿತ್ತು. ಕಸ ವಿಲೇವಾರಿ ಮಾಡಲು ಹೊಸ ಐದು ಟಿಪ್ಪರ್ ಲಾರಿ ಹಾಗೂ ನೀರು ಸರಬರಾಜು ಮಾಡಲು ಒಂದು ಹೊಸ ಟ್ಯಾಂಕರ್ ಖರೀದಿಗೆ ವ್ಯವಸ್ಥೆ ಮಾಡಲಾಗುವುದು. ಸಿಬ್ಬಂದಿ ಹಾಗೂ ಇಂಜಿನಿಯರ್ ಕೊರತೆ ಬಗ್ಗೆ ಸ್ಪೀಕರ್ ಯುಟಿ ಖಾದರ್ ಜೊತೆ ಚರ್ಚೆ ಮಾಡಿ ಸಮಸ್ಯೆ ಪರಿಹಾರ ಮಾಡಲಾಗುವುದು. ಕಸದ ಸಮಸ್ಯೆ ಬಗ್ಗೆ ಚರ್ಚಿಸಲು ಪ್ರತಿ ತಿಂಗಳು ಸಭೆ ನಡೆಸಲಾಗುವುದು ಎಂದು ಸಭೆಗೆ ತಿಳಿಸಿದರು.
2022-23ರಲ್ಲಿ ಬಾಕಿ ಉಳಿದಿರುವ ಎಂಟು ಕಾಮಗಾರಿ, 2023-24ಸಾಲಿನ 13 ಕಾಮಗಾರಿ ಸೇರಿದಂತೆ ಒಟ್ಟು 36 ಕಾಮಗಾರಿಗಳನ್ನು ಜನವರಿ ತಿಂಗಳ ಅಂತ್ಯದಲ್ಲಿ ಪೂರ್ಣ ಗೊಳಿಸುವಂತೆ ಇದೇ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಇಂಜಿನಿಯರ್ ಗೆ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಳ್ಳಾಲ ನಗರ ಸಭೆ ವ್ಯಾಪ್ತಿಯ ಪ್ರಮುಖ ಸಮಸ್ಯೆ ಗಳ ಬಗ್ಗೆ ಈಗಾಗಲೇ ಕೇಳಿದ್ದೇನೆ. ಮುಖ್ಯವಾಗಿ ಕುಡಿಯುವ ನೀರು ಪೂರೈಕೆಗೆ ಸೂಕ್ತವಾದ ಪರಿಹಾರ ಮಾಡುತ್ತೇನೆ. ಪೌರಕಾರ್ಮಿಕರು ಹಳೇ ವಾಹನದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದುದನ್ನು ಮೆಚ್ಚಬೇಕಾಗಿದೆ. ವೀಡಿಯೋ ವೈರಲ್ ನಂತಹ ಸಮಸ್ಯೆ ಇನ್ನು ಬರಬಾರದು. ಈ ಹಿನ್ನೆಲೆಯಲ್ಲಿ ಐದು ಟಿಪ್ಪರ್ ಮತ್ತು ಒಂದು ನೀರು ಸರಬರಾಜು ಮಾಡುವ ವಾಹನ ಖರೀದಿ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಳ್ಲಾಲ ತಾಲೂಕು ತಹಶೀಲ್ದಾರ್ ಪುಟ್ಟ ರಾಜು, ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







