ಭೂಮಿ ಕಳಕೊಂಡವರ ಉದ್ಯೋಗ ಮುಂದುವರಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಗ್ರಹ
ಗೈಲ್ ಕಂಪೆನಿಗೆ ಆದೇಶ ನೀಡುವಂತೆ ಕೇಂದ್ರ ಸಚಿವರಿಗೆ ಪತ್ರ

ದಿನೇಶ್ ಗುಂಡೂರಾವ್
ಮಂಗಳೂರು, ಡಿ.11: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿದ್ದ ಜೆಬಿಎಫ್ಪಿಎಲ್ ಸಂಸ್ಥೆಗೆ ಭೂಮಿ ನೀಡಿ ಉದ್ಯೋಗ ಪಡೆದ ಪಿಡಿಎಫ್ ಉದ್ಯೋಗಿಗಳಿಗೆ ಉದ್ಯೋಗವನ್ನು ಮುಂದುವರಿಸಲು ಈಗ ಜೆಬಿಎಫ್ಪಿಎಲ್ ಅನ್ನು ಸ್ವಾಧೀನಪಡಿಸಿ ಕೊಂಡಿರುವ ಗೈಲ್ಗೆ ಆದೇಶ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲ ಖಾತೆ ಸಚಿವ ಹರಿದೀಪ್ ಎಸ್ ಪುರಿ ಅವರಿಗೆ ಪತ್ರ ಬರೆದಿರುವ ಸಚಿವ ದಿನೇಶ್ ಗುಂಡೂರಾವ್ ಅವರು ಕರ್ನಾಟಕ ಸರಕಾರದ ಪುನರ್ವಸತಿ ನೀತಿ (ಆರ್ ಆ್ಯಂಡ್ ಆರ್) ಮತ್ತು ಲ್ಯಾಂಡ್ ಲೀಸ್ ಒಪ್ಪಂದದ ಅಡಿಯಲ್ಲಿ ಯೋಜನೆಗಾಗಿ ಭೂಮಿ ಕಳಕೊಂಡ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವುದು ಕಡ್ಡಾಯ ಎಂಬ ನಿಯಮವನ್ನು ಪಾಲಿಸಲು ಗೈಲ್ ಸಂಸ್ಥೆಗೆ ತಮ್ಮ ಸಚಿವಾಲಯದ ಅಧಿಕಾರಿಗಳ ಮೂಲಕ ಸ್ಪಷ್ಟ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ.
ಅಕ್ಟೋಬರ್ 10ರಂದು ಈ ಕುರಿತು ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಆಗಿನ ಅಪರ ಮುಖ್ಯ ಕಾರ್ಯದರ್ಶಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಗೈಲ್ನ ಚೇರ್ಮನ್ ಮತ್ತು ಆಡಳಿತ ನಿರ್ದೇಶಕರಿಗೆ ಬರೆದ ಪತ್ರವನ್ನು ಸಚಿವರಿಗೆ ನೀಡಿರುವ ಮನವಿಯೊಂದಿಗೆ ಸಚಿವರು ಲಗತ್ತಿಸಿದ್ದಾರೆ.
ಕರ್ನಾಟಕ ಸರಕಾರದ ಪುನರ್ವಸತಿ ನೀತಿ (ಆರ್ ಆ್ಯಂಡ್ ಆರ್) ಮತ್ತು ಲ್ಯಾಂಡ್ ಲೀಸ್ ಒಪ್ಪಂದದ ಪ್ರಕಾರ ಜೆಬಿಎಫ್ಪಿಎಲ್ ಭೂಮಿ ಕಳಕೊಂಡ ಕುಟುಂಬಗಳ 115 ಮಂದಿಗೆ ಉದ್ಯೋಗ ನೀಡಬೇಕಿತ್ತು. ಅದು 81 ಮಂದಿಗೆ ಉದ್ಯೋಗ ನೀಡಿದ್ದು, ಅವರು ಮಾರ್ಚ್ 2023ರವರೆಗೆ ಸೇವೆಯಲ್ಲಿದ್ದರು. ಉಳಿದ 34 ಮಂದಿಗೆ ಉದ್ಯೋಗ ನೀಡಲು ಬಾಕಿಯಿತ್ತು. ಆ ಬಳಿಕ ಜೆಬಿಎಫ್ಎಲ್ ಅನ್ನು ಗೈಲ್ ಕಂಪೆನಿ ಸ್ವಾಧೀನಪಡಿಸಿಕೊಂಡಿತು. ನಿಯಮಗಳ ಪ್ರಕಾರ ಸ್ವಾಧೀನಪಡಿಸಿಕೊಂಡ ಕಂಪೆನಿ ಮೊದಲ ಕಂಪೆನಿ ಒಪ್ಪಿಕೊಂಡ ಷರತ್ತುಗಳ ಅನ್ವಯ ಉದ್ಯೋಗ ಕೊಡಬೇಕು. ಆದರೆ ಗೈಲ್ ಈ ನಿಯಮಕ್ಕೆ ವಿರುದ್ಧವಾಗಿ ಗೈಲ್ ಮುಕ್ತ ಉದ್ಯೋಗ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದು ಸರಕಾರದೊಂದಿಗೆ ಕಂಪೆನಿ ಒಪ್ಪಿದ ಷರತ್ತುಗಳ ಉಲ್ಲಂಘನೆಯಾಗುತ್ತದೆ ಹಾಗು ಇದರಿಂದ ಭೂಮಿ ಕಳಕೊಂಡ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಭೆ ನಡೆಸಿದ ಬಳಿಕವೂ ಗೈಲ್ ತನ್ನದೇ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ಮುಂದುವರಿಸುವ ಪ್ರಸ್ತಾವ ಇಟ್ಟಿದೆ. ಹೀಗೆ ಷರತ್ತುಗಳನ್ನು ಉಲ್ಲಂಘಿಸುವುದಕ್ಕೆ ಅವಕಾಶವಿಲ್ಲ. ಹಾಗಾಗಿ ಸರಕಾರಕ್ಕೆ ಒಪ್ಪಿಕೊಂಡಿರುವ ಪ್ರಕಾರ ಆ 115 ಮಂದಿಗೆ ಉದ್ಯೋಗವನ್ನು ಮುಂದುವರಿಸಬೇಕು ಎಂದು ಅತೀಕ್ ಅವರು ಪತ್ರದಲ್ಲಿ ತಿಳಿಸಿದ್ದರು.
ಇದೇ ವೇಳೆ ಸಚಿವ ಗುಂಡೂರಾವ್ ಅವರು ಗೈಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ದೀಕ್ಷಿತ್ ಅವರಿಗೆ ಭೂಮಿ ನೀಡಿದ ಕುಟುಂಬಕ್ಕೆ ಸೇರಿರುವ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿಕೆ ವಿಚಾರದಲ್ಲಿ ಸ್ಪಷ್ಟ ನಿರ್ದೇಶನ ನೀಡುವಂತೆ, ಕೇಂದ್ರ ಸರಕಾರದ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್ ಸಚಿವಾಲಯದ ಉಪಕಾರ್ಯದರ್ಶಿ ಆನಂದ್ ಕುಮಾರ್ಗೆ ಬರೆದಿರುವ ಪತ್ರವನ್ನು ಇದೇ ವೇಳೆ ಕೇಂದ್ರ ಸಚಿವರಿಗೆ ನೀಡಿ ಈ ವಿಚಾರದಲ್ಲಿ ಕೂಡಲೇ ಅಗತ್ಯದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.







