ವಾಮಂಜೂರು: ವೈಟ್ ಗ್ರೋ ಅಣಬೆ ತಯಾರಿಕಾ ಘಟಕ ವಿರುದ್ಧ ಪ್ರತಿಭಟನೆ

ವಾಮಂಜೂರು: ವೈಟ್ ಗ್ರೋ ಅಣಬೆ ತಯಾರಿಕಾ ಘಟಕವನ್ನು ಸ್ಥಳಾಂತರಿಸಬೇಕು ಅಥವಾ ಮುಚ್ಚಬೇಕೆಂದು ಒತ್ತಾಯಿಸಿ ವಾಮಂಜೂರು ನಾಗರಿಕರು ಸೋಮವಾರ ವಾಮಂಜೂರು ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮಸ್ಥರಾದ ರಾಜ್ ಕುಮಾರ್ ಶೆಟ್ಟಿ ತಿರುವೈಲು ಗುತ್ತು, ಗ್ರಾಮಸ್ಥರಿಗೆ ಪ್ರತಿಭಟನೆ, ಧರಣಿಗಳ ಅವಶ್ಯಕತೆ ಇಲ್ಲ. ಆದರೆ, ವೈಟ್ ಗ್ರೋ ಅಣಬೆ ತಯಾರಿಕಾ ಘಟಕವು ನಮ್ಮ ಸಮಸ್ಯೆಗಳನ್ನು ನ್ಯಾಯಯುತವಾಗಿ ಪರಿಸಲು ಸಿದ್ಧರಾದರೆ ಗ್ರಾಮಸ್ಥರೂ ಸಂಸ್ಥೆಗೆ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ಬಳಿಕ ಮಾತನಾಡಿದ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಅಝರುದ್ದೀನ್, ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತ ವಿಫಲವಾಗಿದ್ದು, ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿಕೊಂಡು ಅಣಬೆ ಸಂಸ್ಥೆ ಕಾರ್ಯಾಚರಿಸುತ್ತದೆ. ಜೊತೆಗೆ ಜಿಲ್ಲಾಧಿಕಾರಿಯವರು ನೇಮಕ ಮಾಡಿರುವ ಸಮಿತಿಯ ಮೇಲೆ ಗ್ರಾಮಸ್ಥರಿಗೆ ನಂಬಿಕೆ ಇಲ್ಲ. ಸಮಿತಿಯೂ ಸಂಸ್ಥೆಯ ಪರವಾಗಿಯೇ ವರದಿಯನ್ನು ನೀಡುವ ಮೂಲಕ ಜನರ ನಂಬಿಕೆ ಕಳೆದುಕೊಂಡಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸಭೆಯಲ್ಲಿ ಮನಪಾ ಸದಸ್ಯೆ ಹೇಮಾ ರಘು ಸಾಲ್ಯಾನ್, ಲಕ್ಷ್ಮಣ ಶೆಟ್ಟಿಗಾರ್, ಗ್ರಾ. ಪಂ. ಸದಸ್ಯ ಅನಿಲ್ ಕುಮಾರ್, ಸಾಮಾಜಿಕ ಹೋರಾಟಗಾರ ರಿಯಾಝ್ ವಾಮಂಜೂರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.







