ಸಪ್ತ ಮೇಳಗಳ ಮೆರುಗಿನ ‘ಆಳ್ವಾಸ್ ವಿರಾಸತ್’ಗೆ ಚಾಲನೆ
ಭವ್ಯ ಸಾಂಸ್ಕೃತಿಕ ಮೆರವಣಿಗೆಯ ಆಕರ್ಷಣೆ

ಮಂಗಳೂರು: ಸಪ್ತ ಮೇಳಗಳ ಮೆರುಗಿನಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ನಾಲ್ಕು ದಿನಗಳ ‘ಆಳ್ವಾಸ್ ವಿರಾಸತ್’ಗೆ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.
ಈ ಸಂದರ್ಭ ರಾಜ್ಯಪಾಲರು ಮಿಜಾರುಗುತ್ತು ಆನಂದ ಆಳ್ವ ಅವರ ಭಾವಚಿತ್ರ ಇರುವ ಅಂಚೆ ಲಕೋಟೆ ಬಿಡುಗಡೆ ಮಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವರು ದೊಡ್ಡ ಯಾಗ ಮಾಡುತ್ತಿದ್ದಾರೆ. ಇದು ಜ್ಞಾನ ಜಾತ್ರೆ ಮತ್ತು ಜ್ಞಾನ ಯಾತ್ರೆ. ಮುಂದಿನ ಜನಾಂಗಕ್ಕೆ ಸಂಸ್ಕಾರ ಸಂಸ್ಕೃತಿ ದೊಡ್ಡ ಕೆಲಸ. ವಿಜ್ಞಾನ ಜ್ಞಾನದೊಂದಿಗೆ ಸಂಸ್ಕಾರ ಸಂಸ್ಕೃತಿ ಬೆಳೆಯಬೇಕಿದೆ. ಈಗ ಭಾರತ ಕನ್ನಡದ ಬಡ ರಾಷ್ಟ್ರವಾಗಿ ಭಾರತ ಉಳಿದಿಲ್ಲ, ಹಿಂದಿಯ ಬಡಾ ರಾಷ್ಟ್ರ ಆಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಮೋಹನ್ ಆಳ್ವರಂಥ ಅನೇಕರ ತ್ಯಾಗ ಪರಿಶ್ರಮದಿಂದ ದೇಶ ದೊಡ್ಡದಾಗುತಿದೆ. ಮೋದಿ ನಾಯಕತ್ವದಲ್ಲಿ ವಿಶ್ವದಲ್ಲಿ ದೇಶ ಗುರುತಿಸಲ್ಪಟ್ಟಿದೆ. ಸಂಸ್ಕೃತಿ ಸಂಸ್ಕಾರ ಈ ಕಾಲೇಜಿನಲ್ಲಿ ಮಕ್ಕಳಿಗೆ ಸಿಗುತ್ತಿದೆ. ಮುಂದೆಯೂ ಇದು ಮುಂದುವರಿಲಿ. ನಾವೆಲ್ಲರೂ ನಿಮ್ಮ ಜತೆಗಿದ್ದೇವೆ ಎಂದವರು ಹೇಳಿದರು.
ಮಾತೃಭಾಷೆ ಶಿಕ್ಷಣ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ
ಮಾತೃಭಾಷೆ ಶಿಕ್ಷಣ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ. ವಿಶ್ವದ ನಾಲ್ಕು ವಿಕಸಿತ ರಾಷ್ಟ್ರಗಳಾದ ಜರ್ಮನಿ, ಜಪಾನ್, ಫ್ರಾನ್ಸ್ ಹೀಗೆ ಮಾತೃಭಾಷೆಯಲ್ಲೇ ಕಲಿತು ವಿಶ್ವದಲ್ಲಿ ವಿಕಾಸಗೊಂಡಿವೆ. ಆಳ್ವಾಸ್ ನಲ್ಲೂ ಕನ್ನಡದಲ್ಲಿ ಉಚಿತ ಶಿಕ್ಷಣ ಪ್ರಶಂಸನೀಯ ಕಾರ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಿಸಿದರು.
2ನೇ ಬಾರಿ ಇಲ್ಲಿನ ಕಾರ್ಯಕ್ರಮಕ್ಕೆ ಆಗಮಿಸುತ್ತಿರೋದು ವಿಶೇಷ ಅನುಭೂತಿ ನೀಡಿದೆ. ಇಷ್ಟು ದೊಡ್ಡ ಪ್ರಮಾಣದ ಮಕ್ಕಳನ್ನು ಶಿಸ್ತಿನಿಂದ ಬೆಳೆಸೋದು ದೊಡ್ಡ ವಿಷಯ. ಅದು ಆಳ್ವಾಸ್ ನಲ್ಲಿ ಪೋಷಕರ ನಿರೀಕ್ಷೆಯಂತೆ ಬೆಳೆಸುತ್ತಿದ್ದಾರೆ. ಯಶಸ್ವಿ ವಿರಾಸತ್ ಮುಂದಿನ ಎಲ್ಲ ಕಾರ್ಯಗಳಿಗೆ ಪ್ರೇರಣೆ ಆಗಲಿ ಎಂದರು.
ಇದು ವಿಶಿಷ್ಟ ಶಿಕ್ಣಣ ಪ್ರತಿಷ್ಠಾನ. ದೇಶದೆಲ್ಲೆಡೆಯಿಂದ ಬರುತ್ತಾರೆ ಸಾವಿರಾರು ಮಂದಿ ಎಲ್ ಕೆಜಿಯಿಂದ ಪಿಎಚ್ ಡಿವರೆಗೆ ಕಲಿಯುತ್ತಿದ್ದಾರೆ, ಇದು ಉತ್ತಮ ಕಾರ್ಯ. ಶಿಕ್ಷಣದ ಜತೆ ಸಾಹಿತ್ಯ ಸಾಂಸ್ಕೃತಿಕ ಜ್ಞಾನ ನೀಡೋದು ಇಲ್ಲಿನ ವಿಶೇಷತೆ. ಮೋಹನ್ ಆಳ್ವರು ಯುವ ಜನಾಂಗವನ್ನು ವಿಭಿನ್ನವಾಗಿ ರೂಪಿಸುತ್ತಿದ್ದಾರೆ, ಭಾರತೀಯ ಸಂಸ್ಕೃತಿ ಮತ್ತು ಆಲೋಚನೆ ಇಲ್ಲಿ ಪ್ರತಿಫಲವಾಗುತ್ತಿದೆ. ಆಳ್ವಾಸ್ ನ ಕನ್ನಡ ಮಾಧ್ಯಮವನ್ನು ರಾಜ್ಯ ಸರ್ಕಾರ ಸರ್ವಶ್ರೇಷ್ಠ ಶಾಲೆ ಎಂದು ಘೋಷಿಸಿದೆ. ಮಾತೃಭಾಷೆ ಶಿಕ್ಷಣಕ್ಕೆ ಇನ್ನೂ ಹೆಚ್ಚು ಉತ್ತೇಜನ ನೀಡಬೇಕಾಗಿದೆ. ಕ್ರೀಡೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಛಾಪು ಮೂಡಿಸಿದ್ದಾರೆ. ವಿರಾಸತ್ ಮೂಲಕ ಕಲಾವಿದರನ್ನು ಉತ್ತೇಜಿಸುವ ಮೂಲಕ ಮಕ್ಕಳಿಗೆ ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಳ್ಳಲು ಪ್ರೇರಣೆ ನೀಡುತ್ತಿದೆ. ಮಕ್ಕಳ ವೈಯಕ್ತಿಕ, ಸಾಮಾಜಿಕ ಏಳಿಗೆಯ ಮೂಲಕ ದೇಶದ ಅಭಿವೃದ್ಧಿ ಸಾಧ್ಯ. ದೇಶ ಧರ್ಮ ಸಂಸ್ಕೃತಿ ದಾರಿಯಲ್ಲಿ ಮಕ್ಕಳು ಸಾಗಲು ಇಂತಹ ಕಾರ್ಯಕ್ರಮಗಳು ಪ್ರೇರನಾದಾಯಿ ಎಂದವರು ಹೇಳಿದರು.
ಭವ್ಯ ಸಾಂಸ್ಕೃತಿಕ ಮೆರವಣಿಗೆ
100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಸ್ವಾಗತಿಸಿ, ಜಿಲ್ಲೆಗೆ ಸೀಮಿತವಾಗಿದ್ದ ವಿರಾಸತ್ ಇಂದು ಜಾಗತಿಕ ಮಟ್ಟಕ್ಕೆ ಬೆಳೆದಿದೆ. ಇದರ ಅನುಭವವೇ ಸುಖದ ಅನುಭವ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ 29ನೆ ವರ್ಷದ ಆಳ್ವಾಸ್ ವಿರಾಸತ್ ವೀರಯೋಧ ಕ್ಯಾಪ್ಟ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ. ಅವರು ಕುಟುಂಬ ಜೊತೆ ನುಡಿಸಿರಿಗೆ ಭೇಟಿ ನೀಡಿದ್ದರು ಎಂದು ಮೋಹನ್ ಆಳ್ವ ನೆನಪಿಸಿ ಕೊಂಡರು.
ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ , ಮೋಹನ್ ದೇವ್, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿಗಳಾದ ಶಶಿಧರ ಶೆಟ್ಟಿ, ಪ್ರಸನ್ನ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮುಸ್ತಫಾ ಎಸ್.ಎಂ., ಪ್ರವೀಣ್ ಕುಮಾರ್, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ರಾಧಾ , ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ, ಸುರೇಂದ್ರ ಕುಮಾರ್, ಗಣೇಶ್ ಕಾರ್ಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ನಾಮ ನಿಸ್ಟದಾಸ್, ಪ್ರೇಮದಾಸ ಮೊದಲಾದವರು ಉಪಸ್ಥಿತರಿದ್ದರು.







