ದ.ಕ. ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ: ‘ವಾರ್ತಾಭಾರತಿ’ ತಂಡ ಸತತ ಎರಡನೆ ಬಾರಿ ಚಾಂಪಿಯನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರವಿವಾರ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದ ಕ್ರಿಕೆಟ್‌ನಲ್ಲಿ ʼವಾರ್ತಾಭಾರತಿʼ ತಂಡ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನೆಹರೂ ಮೈದಾನದಲ್ಲಿ ನಡೆದ ಕ್ರಿಕೆಟ್‌ನ ಫೈನಲ್‌ನಲ್ಲಿ ವಾರ್ತಾಭಾರತಿ ತಂಡವು ಅಭಿಮತ ತಂಡವನ್ನು ಮಣಿಸಿ ಪ್ರಶಸ್ತಿ ಬಾಚಿಕೊಂಡಿತು. ವೈಯಕ್ತಿಕ ವಿಭಾಗದಲ್ಲೂ ಹಲವು ಪ್ರಶಸ್ತಿಗಳನ್ನು ವಾರ್ತಾಭಾರತಿ ಸಿಬ್ಬಂದಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ರೋಹನ್ ಕಾರ್ಪೊರೇಶನ್‌ನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಪ್ರಶಸ್ತಿ ವಿತರಿಸಿದರು.
ವೈಯಕ್ತಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಬಹುಮಾನ ವಿತರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮುಖ್ಯ ಅತಿಥಿಯಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷರಾದ ಭಾಸ್ಕರ ರೈ ಕಟ್ಟ ಮತ್ತು ರಾಜೇಶ್ ಕೆ ಪೂಜಾರಿ , ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ , ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ, ಮಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷ ಮುಹಮ್ಮದ್ ಆರೀಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಬಾರಿಯ ಕ್ರೀಡಾಕೂಟದಲ್ಲಿ ವಿವಿಧ ಪತ್ರಿಕೆ ಮತ್ತು ಮಾಧ್ಯಮ ಕಚೇರಿಯ ಒಟ್ಟು 12 ಕ್ರಿಕೆಟ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದವು. ಪತ್ರಕರ್ತ ಕಿಶನ್ ಕಾರ್ಯಕ್ರಮ ನಿರೂಪಿಸಿದರು.







