ಬೆಳ್ತಂಗಡಿ| ಪಟಾಕಿ ತಯಾರಿಕಾ ಘಟಕ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಮಂಗಳೂರು: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಡ್ಯಾರ್ ನ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಡ್ಯಾರ್ ಸ.ನಂ. 115/9 ಎಂಬ ಜಮೀನಿನಲ್ಲಿ ಜ.28ರಂದು ಸಂಜೆ 5:30ರ ಸುಮಾರಿಗೆ ಪಟಾಕಿ ತಯಾರಿಸುವ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಪಟಾಕಿ ತಯಾರಿಸುವ ಘಟಕದ ಮಾಲಿಕತ್ವವು ಸೈಯದ್ ಬಶೀರ್ ಎಂಬವರಿಗೆ ಸೇರಿರುವುದಾಗಿದೆ ಮತ್ತು ಸ್ಥಳವೂ ಅವರ ಮಾಲಿಕತ್ವದಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪಟಾಕಿ ತಯಾರಿಕೆಗೆ ಪರವಾನಿಗೆ ಪಡೆದಿರುವ ಸೈಯದ್ ಬಶೀರ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಣೆಗೈದ ನಂತರ ಹೊರಬರಲಿದೆ. ಬಶೀರ್ ಹಲವು ವರ್ಷಗಳಿಂದ ಪಟಾಕಿಯನ್ನು ತಯಾರಿಸುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳ ಹಬ್ಬ ಮತ್ತು ಜಾತ್ರೆ ಸಮಾರಂಭಗಳಿಗೆ ಆಯೋಜಕರ ಬೇಡಿಕೆಯಂತೆ ಪಟಾಕಿಗಳನ್ನು ತಯಾರಿಸಿ ಪೂರೈಸಿಕೊಂಡು ಬಂದಿರುತ್ತಾರೆಂದು ಪೊಲೀಸ್ ಮತ್ತು ಜಿಲ್ಲಾಡಳಿತ ಮಾಹಿತಿ ನೀಡಿರುತ್ತಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಡಿಐಜಿ ಪಶ್ಚಿಮ ವಲಯ, ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಅಪರ ವರಿಷ್ಠಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಬೆಳ್ತಂಗಡಿ, ತಾಪಂ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು, ಬೆಳ್ತಂಗಡಿ ಮತ್ತು ಎಲ್ಲಾ ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ನಿನ್ನೆ ಸಂಜೆಯಿಂದ ಸ್ಥಳದಲ್ಲಿ ಇದ್ದು ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಪಟಾಕಿ ತಯಾರಿಸುವ ಘಟಕಕ್ಕೆ 2011, ಡಿ. 14ರಂದು ಪರವಾನಿಗೆಯನ್ನು ಪಡೆದಿರುವುದಾಗಿ ಅಧಿಕಾರಿಗಳು ದಾಖಲೆ ಯನ್ನು ಪರಿಶೀಲಿಸುವ ವೇಳೆ ತಿಳಿದುಬಂದಿದ್ದು, ಪರವಾನಿಗೆಯನ್ನು ಎ.1, 2019ರಿಂದ ಮಾ.31, 2024ರವೆರೆಗೆ ನವೀಕರಿಸಲಾಗಿರುತ್ತದೆ.
ದುರಂತದಲ್ಲಿ 3 ಮಂದಿ ಮೃತಪಟ್ಟಿರುತ್ತಾರೆ, ಇವರನ್ನು ವರ್ಗೀಸ್ (69), ನಾರಾಯಣನ್ ಅಲಿಯಾಸ್ ಕುಂಞ (55) ಇವರಿಬ್ಬರು ಪಾಲಾಕಾಡ್ ಕೇರಳ ರಾಜ್ಯಕ್ಕೆ ಸೇರಿದವರಾಗಿರುತ್ತಾರೆ. ಮತ್ತೊಬ್ಬ ವ್ಯಕ್ತಿ ಚೇತನ್ (25) ಅರಸೀಕೆರೆ ಹಾಸನ ಜಿಲ್ಲೆಗೆ ಸೇರಿದವರಾಗಿರುತ್ತಾರೆ.
ನಾರಾಯಣನ್ ಅಲಿಯಾಸ್ ಕುಂಞ ಅವರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿರುತ್ತದೆ, ಇನ್ನುಳಿದಂತೆ ಸ್ಥಳದಲ್ಲಿ ದೇಹದ ಅಂಗಾಂಗಗಳು ಪತ್ತೆಯಾಗಿದ್ದು ಅವುಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆಗೆ ರವಾನಿಸಲಾಗಿರುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







