ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಹಾಸ್ಟೆಲ್: ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟನೆ

ಸುರತ್ಕಲ್: ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಮೂರು ಹಾಸ್ಟೆಲ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಉದ್ಘಾಟಿಸಿದರು.
ಎನ್‌ಐಟಿಕೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರವನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ರಹ್ಮಗಿರಿ, ಗೋಧಾವರಿ, ಶಿವಾಲಿಕ್ ಎಂಬ ಮೂರು ಅತ್ಯುನ್ನತ ಮಟ್ಟದ ಹಾಸ್ಟೆಲ್ ಗಳನ್ನು ಇಂದು ಉದ್ಘಾಟಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಸಮರ್ಪಿಸಲಾಗಿದೆ ಎಂದರು. ಹೊಸ ರಾಷ್ಟ್ರೀಯ ಶೀಕ್ಷಣ ನೀತಿಯಿಂದ ಶಿಕ್ಷಣದಲ್ಲಿ ಪರಿವರ್ತನೆ ಆರಂಭಗೊಂಡಿದೆ. ಶಿಕ್ಷಣದೊಂದಿಗೆ ದೇಶ ಪರಿವರ್ತನೆ ಗೋಳ್ಳುತ್ತಿದ್ದು, ಇದರೊಂದಿಗೆ ಎನ್ ಐಟಿಕೆಯೂ ಪರಿವರ್ತನೆ ಗೊಳ್ಳುತ್ತಿದೆ ಎಂದರು.
ಸಮಾರಂಭದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್, ಉದಯ ಭಟ್, ಎನ್ ಐಟಿಕೆ ಡೈರೆಕ್ಟರ್ ಡಾ. ರವಿ, ಕಾರ್ಪೊರೇಟರ್ಗಳಾದ ಶೋಭಾ ರಾಜೇಶ್, ಶ್ವೇತಾ ಮೊದಲಾದವರು ಉಪಸ್ಥಿತರಿದ್ದರು.
1960ರಲ್ಲಿ ಸ್ಥಾಪಿತವಾದ ಎನ್‌ಐಟಿಕೆ ಸುರತ್ಕಲ್ ಭಾರತದ ಪ್ರಮುಖ 12ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಜೈವಿಕ-3D ಮುದ್ರಣ, ಮಾಹಿತಿ ಭದ್ರತೆ, ವಿದ್ಯುತ್ ಸಾರಿಗೆ ಮತ್ತು ಸುಸ್ಥಿರತೆಯಂತಹ ಅತ್ಯಾಧುನಿಕ ಪ್ರದೇಶಗಳಲ್ಲಿ 11 UG, 31 PG ಮತ್ತು ಡಾಕ್ಟರೇಟ್ ಸಂಶೋಧನಾ ಕಾರ್ಯಕ್ರಮಗಳನ್ನು ನೀಡುವ 14 ಶೈಕ್ಷಣಿಕ ವಿಭಾಗಗಳನ್ನು ಹೊಂದಿದೆ. ಇದರ ಕ್ಯಾಂಪಸ್ ಕರಾವಳಿಯುದ್ದಕ್ಕೂ 294 ಎಕರೆ ಪರಿಸರದಲ್ಲಿದೆ. ಸಂಸ್ಥೆಯು ಸುಮಾರು 7000 ವಿದ್ಯಾರ್ಥಿಗಳನ್ನು ಹೊಂದಿದೆ. ಅವರಲ್ಲಿ ಹೆಚ್ಚಿನವರು ಕ್ಯಾಂಪಸ್ನಲ್ಲಿ ವಾಸಿಸುತ್ತಿದ್ದಾರೆ. 275ಕ್ಕೂ ಹೆಚ್ಚು ಅಧ್ಯಾಪಕರು, 400ಕ್ಕೂ ಹೆಚ್ಚಿನ ಸಿಬ್ಬಂದಿಯ ಬೆಂಬಲದೊಂದಿಗೆ ಬೋಧನೆ-ಕಲಿಕೆ, ಸಂಶೋಧನೆ, ಅಭಿವೃದ್ಧಿ, ಸಲಹಾ ಮತ್ತು ಪ್ರಭಾವ ಚಟುವಟಿಕೆಗಳಲ್ಲಿ ಸಂಸ್ಥೆ ತೊಡಗಿಕೊಂಡಿದೆ. ಸಂಸ್ಥೆಯು 30,000ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಹೊಂದಿದೆ.







