ಮಂಗಳೂರು: ಸಮುದ್ರದಲ್ಲಿ ಕೋಸ್ಟ್‌ಗಾರ್ಡ್ ಕಸರತ್ತು; ತುರ್ತು ರಕ್ಷಣೆಯ ಅಣಕು ಕಾರ್ಯಾಚರಣೆ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವೀಕ್ಷಣೆ

ಮಂಗಳೂರು: ಸಮುದ್ರದ ನಡುವೆ ಬೆಂಕಿ ಅವಘಡಕ್ಕೆ ಸಿಲುಕಿದ ಹಡಗಿನ ರಕ್ಷಣೆ, ಕಡಲ್ಗಳ್ಳರ ಹಡಗಿನ ಪತ್ತೆ ಮತ್ತು ವಶ ಕಾರ್ಯಾಚರಣೆ, ನೀರಲ್ಲಿ ಮುಳುಗುತ್ತಿದ್ದ ಮೀನುಗಾರರನ್ನು ಹೆಲಿಕಾಪ್ಟರ್ ಹಾಗೂ ಇಂಟರ್‌ಸೆಪ್ಟರ್ ದೋಣಿ ಮೂಲಕ ಮೇಲಕ್ಕೆತ್ತಿ ಜೀವರಕ್ಷಣೆ, ಗುಂಡು ಹಾರಾಟ, ಬೋರ್ಡಿಂಗ್... ಹೀಗೆ ಸಮುದ್ರದ ಮಧ್ಯೆ ಕೋಸ್ಟ್ ಗಾರ್ಡ್ ತನ್ನ ಅತ್ಯಾಧು ನಿಕ ತಂತ್ರಜ್ಞಾನ, ವ್ಯವಸ್ಥೆಗಳೊಂದಿಗೆ ನಿರ್ವಹಿಸುವ ಸಾಹಸಮಯ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ಶುಕ್ರವಾರ ಮಂಗಳೂರಿನ ಎನ್‌ಎಂಪಿಎ ಬಳಿಯ ಕಡಲಿನಲ್ಲಿ ನಡೆಯಿತು.
ಎನ್‌ಎಂಪಿಎಯಿಂದ ಸುಮಾರು 15 ನಾಟಿಕಲ್ ಮೈಲು ದೂರದ ಸಮುದ್ರದ ನಡುವೆ ನಡೆದ ಈ ಅಣಕು ಕಾರ್ಯಾಚರ ಣೆಗೆ ಕರ್ನಾಟಕ ಸರಕಾರದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೂ ಸಾಕ್ಷಿಯಾದರು.
ಬೆಳಗ್ಗೆ ಸುಮಾರು 11 ರಿಂದ 1.30ರವರೆಗೆ ನಡೆದ ಕೋಸ್ಟ್‌ಗಾರ್ಡ್‌ನ ಈ ವಿವಿಧ ರೀತಿಯ ರಕ್ಷಣಾ ಅಣುಕು ಕಾರ್ಯಾ ಚರಣೆಯಲ್ಲಿ 2 ಇಂಟರ್ ಸೆಪ್ಟರ್, 2 ಡ್ರಾನಿಯರ್ಸ್, ಒಂದು ಅತ್ಯಾಧುನಿಕ ಹೆಲಿಕಾಪ್ಟರ್, 6 ಹಡಗುಗಳು, ಒಂದು ಕಡಲಾಚೆಯ ಗಸ್ತು ಹಡಗು (ಆಫ್‌ಶೋರ್ ಪ್ಯಾಟ್ರಲ್ ವೆಸೆಲ್- ಒಪಿವಿ) 3 ವೇಗದ ಗಸ್ತು ನೌಕೆ (ಫಾಸ್ಟ್ ಪ್ಯಾಟ್ರಲ್ ವೆಸೆಲ್- ಎಫ್‌ಪಿವಿ)ಗಳು ಕೋಸ್ಟ್ ಗಾರ್ಡ್ ಅಧಿಕಾರಿಗಳ ಮಾರ್ಗದರ್ಶನದ ಕಾರ್ಯಾಚರಣೆಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದವು.
2018ರಿಂದ ಕರಾವಳಿ ಕಡಲಿನಲ್ಲಿ ಕೋಸ್ಟ್‌ಗಾರ್ಡ್‌ನ ಕಡಲಾಚೆಯ ಗಸ್ತು ಹಡಗಾಗಿ ಕಾರ್ಯಾಚರಿಸುತ್ತಿರುವ ‘ವಿಕ್ರಂ’ ನೊಳಗೆ ಬೆಳಗ್ಗೆ 10.30ರ ವೇಳೆಗೆ ಪ್ರವೇಶಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೋಸ್ಟ್‌ಗಾರ್ಡ್ ಗೌರವದೊಂದಿಗೆ ಸ್ವಾಗತಿಸಲಾಯಿತು.
ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಕಮಾಂಡಿಂಗ್ ಅಫೀಸರ್ ಹಾಗೂ ಡಿಐಜಿ ಅಶೋಕ್ ಕುಮಾರ್ ಭಾಮ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅಲ್ಲದೆ, ಕೋಸ್ಟ್‌ಗಾರ್ಡ್ ಅಧಿಕಾರಿ- ಸಿಬ್ಬಂದಿ, ಕೆಲ ಪ್ರವಾಸಿಗರು ಸೇರಿದಂತೆ ಸುಮಾರು 200ಕ್ಕೂ ಅಧಿಕ ಮಂದಿಯನ್ನು ಹೊತ್ತ ವಿಕ್ರಂ ಕೋಸ್ಟ್‌ಗಾರ್ಡ್ ಎನ್‌ಎಂಪಿಎಯಿಂದ ಸಮುದ್ರದ ಸುಮಾರು 15 ನಾಟಿಕಲ್ ಮೈಲಿಗೆ ತೆರಳಿದ ಬಳಿಕ ಅಣುಕು ಕಾರ್ಯಾಚರಣೆ ಆರಂಭಗೊಂಡಿತು.
ಸಮುದ್ರ ಮಧ್ಯೆ ಹಡಗಿಗೆ ಬೆಂಕಿ- ಗುಂಡು ಹಾರಾಟ
ಕೋಸ್ಟ್‌ಗಾರ್ಡ್‌ನ ರಕ್ಷಣಾ ಕಾರ್ಯಾಚರಣೆಯ ಅಣಕಿನ ಭಾಗವಾಗಿ ಸಮುದ್ರ ಮಧ್ಯೆ ಹಡಗಿಗೆ ಬೆಂಕಿ ಬಿದ್ದಾಗ ಅದನ್ನು ವಿಕ್ರಂನಲ್ಲಿದ್ದ ಬೃಹತ್ ನೀರಿನ ಸ್ಪ್ರಿಂಕ್ಲರ್‌ನಿಂದ ಸುಮಾರು ಒಂದು ಕಿ.ಮೀ.ದೂರಕ್ಕೆ ನೀರು ಹಾಯಿಸಿ ನಂದಿಸುವುದು ಹಾಗೂ ಸಮುದ್ರದಲ್ಲಿ ಕಡಲ್ಗಳ್ಳರ ಹಡಗನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವ ವೇಳೆ ಕೋಸ್ಟ್‌ಗಾರ್ಡ್ ರಕ್ಷಣಾ ಹಡಗಿನಿಂದ ಕೆಂಪು, ಹಸಿರು ಬಣ್ಣದ ಗುಂಡು ಹಾರಾಟ, ನೀರಿನಲ್ಲಿ ಮುಳುಗೇಳುತ್ತಾ ಅಪಾಯದಲ್ಲಿ ಸಿಲುಕಿದ್ದ ನಾವಿಕರ ರಕ್ಷಣೆಗಾಗಿ ಆಗಸದಲ್ಲಿ ಅತ್ತಿತ್ತ ಹಾರಾಡುತ್ತಾ ರಕ್ಷಣೆಗೆ ಧಾವಿಸಿದ ಹೆಲಿಕಾಪ್ಟರ್‌ನ ಸಾಹಸಮಯ ದೃಶ್ಯ ಅಲ್ಲಿ ಸೇರಿದ್ದವರನ್ನು ದಿಗ್ಭ್ರಮೆ ಗೊಳಿಸುವಂತಿತ್ತು. ಬಿರು ಬಿಸಿಲಿನ ನಡುವೆ, ಸಮುದ್ರದ ಅಲೆಗಳಲ್ಲಿ ಓಲಾಡುತ್ತಾ ಸಾಗುತ್ತಿದ್ದ ವಿಕ್ರಂ ಹಡಗಿನಲ್ಲಿದ್ದವರು ಕೂಡಾ ಅತ್ತಿಂದಿತ್ತ ಓಲಾಡುತ್ತಲೇ ನಡೆದಾಡಿ, ಕೋಸ್ಟ್‌ಗಾರ್ಡ್‌ನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ಸಮುದ್ರ ಹಾಗೂ ಆಕಾಶದ ನಡುವೆ ನಡೆಸುತ್ತಿದ್ದ ಸಾಹಸಮಯ ದೃಶ್ಯಗಳನ್ನು ಕಣ್ತುಂಬಿಸಿಕೊಂಡರು.
ಇದೊಂದು ಅದ್ಭುತ ಅನುಭವ
‘ಕೋಸ್ಟ್‌ಗಾರ್ಡ್‌ನ ಈ ಅದ್ಭುತ ಸಾಹಸಮಯ ಕವಾಯತು ನೋಡುವ ಮೊದಲ ಅವಕಾಶ ನನ್ನದಾಯಿತು. ದೇಶದ ಕಡಲು ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್ ಪಾತ್ರ ಬಹುಮುಖ್ಯವಾಗಿದ್ದು, ನಮ್ಮ ಕೋಸ್ಟ್‌ಗಾರ್ಡ್ ನಮ್ಮ ಹೆಮ್ಮೆ’ ಎಂದು ಪಂಜಾಬ್ ನಿವಾಸಿ ಅಮಿತಾ ಶರ್ಮಾ ಅಭಿಪ್ರಾಯಿಸಿದರು.
ಕೋಸ್ಟ್‌ಗಾರ್ಡ್ ಸೇವೆ ಸಾಹಸಮಯ ಅನುಭವ
‘ಕಳೆದ 30 ವರ್ಷಗಳಿಂದ ಕೋಸ್ಟ್‌ಗಾರ್ಡ್‌ನಲ್ಲಿ ಸೇವೆಯಲ್ಲಿದ್ದು, ಪಾರಾದೀಪ್, ವಿಶಾಖಪಟ್ಟಣಂ, ಗಾಂಧಿನಗರ ಮೊದ ಲಾದ ಕಡೆ ಸೇವೆ ಸಲ್ಲಿಸಿ ಇದೀಗ ಕರ್ನಾಟಕ- ಮಂಗಳೂರು ವಿಭಾಗದಲ್ಲಿದ್ದೇನೆ. ಮುಂದೆ ಗೋವಾಕ್ಕೆ ಹೋಗಲಿದ್ದೇನೆ. ಕೋಸ್ಟ್‌ಗಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುವುದೆಂದರೆ ಅದೊಂದು ಸಾಹಸಮಯ ಅನುಭವ ಮಾತ್ರವಲ್ಲದೆ ಪ್ರಕೃತಿ ಯೊಂದಿಗಿನ ಒಡನಾಟ’ ಎಂದು ಕೋಸ್ಟ್‌ಗಾರ್ಡ್‌ನಲ್ಲಿ ಇನ್ಸ್‌ಪೆಕ್ಟರ್ ದರ್ಜೆಯ ಪ್ರಧಾನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಹಾರ ಮೂಲದ ಅಧಿಕಾರಿಯೊಬ್ಬರು ಮಾತಿಗೆ ಸಿಕ್ಕಾಗ ಅನಿಸಿಕೆ ವ್ಯಕ್ತಪಡಿಸಿದರು.
‘ಮಳೆಗಾಲದ ಸಂದರ್ಭ ಕೋಸ್ಟ್‌ಗಾರ್ಡ್‌ನ ಹಡಗಿನಲ್ಲಿ ಕಾರ್ಯಾಚರಣೆಯಲ್ಲಿರುವುದು ವಿಶೇಷ ಅನುಭವ ನೀಡಿದೆ. ಕಳೆದ ಐದು ವರ್ಷಗಳಿಂದ ಸೇವೆಯಲ್ಲಿದ್ದೇನೆ. ಕೋಸ್ಟ್‌ಗಾರ್ಡ್‌ನ ಸಿಬ್ಬಂದಿ ಆಗಿರುವುದಕ್ಕೆ ಹೆಮ್ಮೆ ಇದೆ’ ಎಂದು ಒರಿಸ್ಸಾ ಮೂಲದ ಸಿಬ್ಬಂದಿ ಅಭಿಪ್ರಾಯಿಸಿದರು.
ಕಡಲ ಗಡಿ ರಕ್ಷಣೆಯಲ್ಲಿ ಕೋಸ್ಟ್‌ಗಾರ್ಡ್ ಪಾತ್ರ ಮಹತ್ತರ: ರಾಜ್ಯಪಾಲ ಥಾವರ್‌ಚಂದ್
ಭಾರತೀಯ ಕೋಸ್ಟ್‌ಗಾರ್ಡ್ ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿದ್ದು, ಕಡಲ ಗಡಿಗಳನ್ನು ರಕ್ಷಿಸು ವಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದೆ. ಭಾರತೀಯ ಕೋಸ್ಟ್ ಗಾರ್ಡ್ ದೇಶದ ಸುಮಾರು 7500 ಕಿಲೋಮೀಟರ್ ಕಡಲ ಗಡಿಗಳ ರಕ್ಷಣೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊಂದಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಿಸಿದ್ದಾರೆ.
ಗುರುವಾರ ಸಂಜೆ ಎನ್‌ಎಂಪಿಎಯಲ್ಲಿ ಆಯೋಜಿಸಲಾದ 48ನೆ ಭಾರತೀಯ ಕೋಸ್ಟ್ ಗಾರ್ಡ್ ದಿನಾಚರಣೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಕೋಸ್ಟ್‌ಗಾರ್ಡ್‌ನ ಕರಾವಳಿ ಅಧಿಕಾರಿಗಳು, ಸೈನಿಕರು ಮತ್ತು ಅವರ ಕುಟುಂಬಗಳಿಗೆ ಭಾರತೀಯ ಕೋಸ್ಟ್ ಗಾರ್ಡ್ ದಿನಾಚರಣೆ ಶುಭಾಶಯ ಕೋರಿದ ರಾಜ್ಯಪಾಲರು, ಕೋಸ್ಟ್ ಗಾರ್ಡ್ ನಮ್ಮ ಕಡಲ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಕಡಲ ನಿಯಮಗಳ ಅನುಪಾಲನೆ ಖಾತ್ರಿಪಡಿಸುವ ದೇಶದ ಸಶಸ್ತ್ರ ಪಡೆಯಾಗಿದೆ ಎಂದರು.
ಸಾಗರ ವ್ಯಾಪಾರ ಮತ್ತು ಸಾರಿಗೆ ಜಾಗತಿಕ ಆರ್ಥಿಕತೆಯ ಬೆನ್ನೆಲುಬು. ಕಳೆದ ಎರಡು ದಶಕಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಕಡಲ ವ್ಯಾಪಾರ ಮತ್ತು ವಾಣಿಜ್ಯದ ಪ್ರಾಮುಖ್ಯತೆಯನ್ನು ಸ್ಥಾಪಿಸಿದೆ. ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಯು ದೇಶೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ಕಡಲ ಸಂಚಾರದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಜಾಗತಿಕ ಪ್ರವೃತ್ತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಈ ಕಾರಣದಿಂದಾಗಿ ಹುಡುಕಾಟ ಮತ್ತು ಪಾರುಗಾಣಿಕಾ, ಸಮುದ್ರ ಮಾಲಿನ್ಯ, ಕಡಲ ಭಯೋತ್ಪಾದನೆ, ಅಕ್ರಮ ಕಳ್ಳಸಾಗಣೆ ಸೇರಿದಂತೆ ಹಲವು ಸಮಸ್ಯೆಗಳೊಂದಿಗೆ ಕಡಲ ವ್ಯಾಪಾರ ಮತ್ತು ಭದ್ರತೆಯು ಹೆಚ್ಚು ಸವಾಲಾಗಿದೆ. ಈ ನಿಟ್ಟಿನಲ್ಲಿ ಕೋಸ್ಟ್ ಗಾರ್ಡ್‌ನ ಪಾತ್ರವು ಮಹತ್ವದ್ದಾಗಿದೆ ಎಂದು ಹೇಳಿದರು.
ಕೋಸ್ಟ್ ಗಾರ್ಡ್ ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಹಲವು ದೇಶಗಳೊಂದಿಗೆ ಜಂಟಿ ವ್ಯಾಯಾಮ ಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಭಾಗವಹಿಸುವುದನ್ನು ಮುಂದುವರೆಸಿದೆ. ಇಂತಹ ಅಂತರಾಷ್ಟ್ರೀಯ ಮಾತುಕತೆಗಳ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ದೇಶದ ಹಿತಾಸಕ್ತಿಗಳನ್ನು ಖಾತ್ರಿಪಡಿಸಿದೆ ಮತ್ತು ದೇಶಕ್ಕೆ ಅಂತರಾಷ್ಟ್ರೀಯ ಖ್ಯಾತಿಯನ್ನು ತಂದಿದೆ. ಭಾರತೀಯ ಕೋಸ್ಟ್ ಗಾರ್ಡ್ ನೈಸರ್ಗಿಕ ವಿಕೋಪಗಳಿಗೆ ಪ್ರತಿಕ್ರಿಯೆಯಾಗಿ ಗಮನಾರ್ಹ ಕೊಡುಗೆಯನ್ನು ನೀಡಿದೆ ಮತ್ತು ಕರ್ನಾಟಕಕ್ಕೆ ಅಪ್ಪಳಿಸಿದ ತೌಕ್ಟೇ, ಗುಲಾಬ್ ಮತ್ತು ಶಾಹೀನ್‌ನಂತಹ ಚಂಡಮಾರುತಗಳ ಸಮಯದಲ್ಲಿ ಜೀವ ಮತ್ತು ಆಸ್ತಿಯನ್ನು ಉಳಿಸಿದೆ. ಮೀನುಗಾರರ ಸುರಕ್ಷತೆಯ ಜೊತೆಗೆ ಸಮುದಾಯ ಸಂವಹನ ಕಾರ್ಯಕ್ರಮಗಳ ಮೂಲಕ ಮೀನುಗಾರರಿಗೆ ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಅರಿವನ್ನು ಕೋಸ್ಟ್‌ಗಾರ್ಡ್ ಮೂಡಿಸುತ್ತದೆ. ಭಾರತೀಯ ಕರಾವಳಿಯುದ್ದಕ್ಕೂ ಎಲೆಕ್ಟ್ರಾನಿಕ್ ಕಣ್ಗಾವಲು ಜಾಲಗಳನ್ನು ಸ್ಥಾಪಿಸುವಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ದಿಸೆಯಲ್ಲಿ ನಾಲ್ಕು ರಾಡಾರ್ ಕೇಂದ್ರಗಳು ಕರ್ನಾಟಕದಲ್ಲಿ ಸುರತ್ಕಲ್, ಭಟ್ಕಳ ಮತ್ತು ಬೇಲಿಕೇರಿ ಮತ್ತು ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಸೇರಿದಂತೆ ಮುಂತಾದ ಗಣ್ಯರು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







