ಡಾ.ಶಿವರಾಮ ಕಾರಂತ - ಕೆ.ಟಿ.ಗಟ್ಟಿ ಆಶಯ ಒಂದೇ ಆಗಿತ್ತು: ಡಾ. ಸತ್ಯಜಿತ್

ಮಂಗಳೂರು: ಕಾದಂಬರಿಕಾರ ಕೆ.ಟಿ.ಗಟ್ಟಿ ಅವರು ದ.ಕ.ಜಿಲ್ಲೆಯ ಕೆಲಸ್ತರದ,ಮಧ್ಯಮ ವರ್ಗದ ಜನರನ್ನು ವೈಜ್ಞಾನಿಕತೆ ಮತ್ತು ವೈಚಾರಿಕತೆಯ ಮೂಲಕ ಕೊಂಡು ಹೋಗಬೇಕೆಂಬ ಕನಸು ಕಂಡಿದ್ದರು. ಡಾ.ಶಿವರಾಮ ಕಾರಂತ ಅವರ ಆಶಯವೇ ಕೆ.ಟಿ.ಗಟ್ಟಿ ಅವರ ಆಶಯ ಆಗಿತ್ತು ಎಂದು ಕೆ.ಟಿ.ಗಟ್ಟಿ ಸುಪುತ್ರ ಪ್ರಾಧ್ಯಾಪಕ ಡಾ. ಸತ್ಯಜಿತ್ ಕೆಟಿ ಗಟ್ಟಿ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಅಗಲಿದ ಖ್ಯಾತ ಸಾಹಿತಿ, ಭಾಷಾ ತಜ್ಞ ಕೆ.ಟಿ. ಗಟ್ಟಿ ಅವರಿಗೆ ತುಳು ಪರಿಷತ್ ವತಿಯಿಂದ ಮ್ಯಾಪ್ಸ್ ಕಾಲೇಜಿ ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಅವರು ಅದೇ ಆಶಯ ದ.ಕ.ಜಿಲ್ಲೆಯಲ್ಲೂ ಮುಂದೆ ಬರಲಿ ಎಂದು ಅಭಿಪ್ರಾಯಪಟ್ಟರು.
ನಾನೊಬ್ಬ ಭೌತಶಾಸ್ತ್ರ ಪ್ರಾಧ್ಯಾಪಕ. ಅದು ನನ್ನ ಆಯ್ಕೆ ಆಗಿತ್ತು. ತಂದೆಯ ದೊಡ್ಡ ಪ್ರಭಾವ ತಮ್ಮ ಮೇಲೆ ಆಗಿದೆ. ತುಂಬಾ ಕರಕೌಶಲ್ಯ ಅವರಲ್ಲಿತ್ತು. ಓದುಗ ಬೇರೆ ಮಗ ಬೇರೆ ಅಲ್ಲ. ನಾನು ಅವರ ಸಾಹಿತ್ಯ ಕೃತಿಗಳನ್ನು ಓದುತ್ತಾ ಬೆಳೆದವನು ಎಂದರು.
ನನಗೆ 50 ವರ್ಷ. ಈ ಐವತ್ತು ವರ್ಷಗಳನ್ನು ಐದು ಭಾಗ ಮಾಡಿದರೆ ಮೊದಲ 10 ವರ್ಷಗಳಲ್ಲಿ ಅವರ ಬಗ್ಗೆ ನನಗೇನು ಗೊತ್ತಿರಲಿಲ್ಲ. ಆದರೆ ಕೊನೆಯ 10 ವರ್ಷಗಳಲ್ಲಿ ನನಗೆ ಪ್ರತಿಯೊಂದು ವಿಚಾರಗಳಲ್ಲೂ ಅವರು ನನಗೆ ಮಾರ್ಗದರ್ಶ ಕರಾಗಿದ್ದರು. ಸಣ್ಣ ಸಣ್ಣ ವಿಷಯಗಳನ್ನು ನನಗೆ ಕಲಿಸಿದ್ದರು ಎಂದು ಹೇಳಿದರು.
ಆಗಾದ ಪ್ರತಿಭೆ, ಕೈತುಂಬಾ ಸಂಬಳ ಇರುವ ಕೆಲಸವನ್ನು ಬಿಟ್ಟು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ಒಳ್ಳೆಯ ಸಂಬಳ ಬರುತ್ತದೆ. ಬರೆಯಲು ಸುಲಭ ಎಂದು ಎಲ್ಲರೂ ಯೋಚಿಸುತ್ತಾರೆ. ಆದರೆ ಅಪ್ಪ ಎಲ್ಲವನ್ನೂ ಬಿಟ್ಟು ಬರೆಯುವ ಕೆಲಸಕ್ಕೆ ಧೈರ್ಯವಾಗಿ ಮುನ್ನುಗ್ಗಿದ್ದರು. ಹಣಕಾಸಿನ ಸಮಸ್ಯೆ ಸೇರದಂತೆ ಬದುಕಿನ ನಾನಾ ಸವಾಲುಗಳನ್ನು ಎದುರಿ ಸುತ್ತಾ ಬರೆದವರು. ಅವರಲ್ಲಿ ಭಾವುಕತೆ ಇತ್ತು. ಅವರೊಬ್ಬ ಭಾವುಕ ವ್ಯಕ್ತಿ ಅವರಲ್ಲಿ ಇದ್ದಷ್ಟು ಭಾವುಕತೆ ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಅವರ ಮಾತೇ ನನ್ನನ್ನು ಬೆಳೆಸಿದ್ದು. ಅವರಿಗೆ ಮಧ್ಯಮ ವರ್ಗದ ಕೆಳಸ್ತರದ ಜನರ ಬಗ್ಗೆ ತುಡಿತ ಇತ್ತು ಎಂದರು.
ಮುಲ್ಕಿ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ನಿವೃತ್ತ ಪ್ರಾಧ್ಯಾಪಕ ಡಾ.ಶಿವರಾಮ ಶೆಟ್ಟಿ, ಲೇಖಕಿ ಉಷಾ ರೈ, ಪ್ರಾಧ್ಯಾಪಕ ಡಾ.ಮಾಧವ ಎಂ.ಕೆ, ನಿವೃತ್ತ ಉಪನ್ಯಾಸಕಿ ಮೀನಾಕ್ಷಿ ರಾಮಚಂದ್ರ, ಚಿಂತಕ ಎಂ.ಜಿ. ಹೆಗಡೆ, ಹಿರಿಯ ಪತ್ರಕರ್ತ ನಂದಗೋಪಾಲ್, ದ.ಕ.ಜಿ.ಪಂ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಮೀನಾಕ್ಷಿ ಲೇಖಕಿ ಮೀನಾಕ್ಷಿ ಕಳವಾರು, ಡಾ.ಚೇತನ ಸೋಮೇಶ್ವರ ನುಡಿನಮನ ಸಲ್ಲಿಸಿದರು.
ಬ್ಯಾರಿ ಪರಿಷತ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಲೇಖಕಿ ಶ್ಯಾಮಲಾ ಮಾಧವ, ಡಾ. ಪ್ರಭಾಕರ ನೀರುಮಾರ್ಗ, ಶುಭೋಧಯ ಆಳ್ವ, ಗಣೇಶ್ ಪೂಜಾರಿ, ಶಾಂತಲಾ ಗಟ್ಟಿ, ಬೆನೆಟ್ ಅಮ್ಮಣ್ಣ, ಸುಭೋಧಯ ಆಳ್ವ, ಶಾಲೆಟ್ ಪಿಂಟೊ, ಪತ್ನಿ ಯಶೋಧ, ಪುತ್ರಿಯರಾದ ಚಿತ್‌ಪ್ರಭಾ ಮತ್ತು ಪ್ರಿಯದರ್ಶಿನಿ , ತಂಗಿ ಶಾರದಾ ಮತ್ತಿತರರು ಉಪಸ್ಥಿತರಿದ್ದರು.
ತುಳು ಪರಿಷತ್ ಅಧ್ಯಕ್ಷ ಪತ್ರಕರ್ತ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.







