ಟಿಡಿಆರ್ ಹಗರಣ| ಲಂಚದ ಹಣ ಪಡೆಯಲು ಬಂದ ಸಲೀಂ , ದೂರುದಾರ ಗಿರಿಧರ್ ಶೆಟ್ಟಿಯ ಏಜೆಂಟ್: ಮುನೀರ್ ಕಾಟಿಪಳ್ಳ ಆರೋಪ

ಆರೋಪಿ ಸಲೀಂ
ಮಂಗಳೂರು: ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಲಂಚದ ಹಣ ಪಡೆಯಲು ಬಂದ ಆರೋಪಿ ಸಲೀಂ ರಿಯಲ್ ಎಸ್ಟೇಟ್ ಉದ್ಯಮಿ, ದೂರುದಾರ ಗಿರಿಧರ್ ಶೆಟ್ಟಿಯ ಏಜೆಂಟ್ ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ರ ಆಪ್ತರಾಗಿರುವ ಗಿರಿಧರ್ ಶೆಟ್ಟಿಯೊಂದಿಗೆ 11 ಎಕರೆ ಜಮೀನು ಟಿಡಿಆರ್ನಡಿ ಖರೀದಿಸುವ ಡೀಲ್ನ ಹಿಂದಿರುವ ಹಗರಣ ಒಂದೊಂದಾಗಿ ಅನಾವರಣಗೊಳ್ಳುತ್ತಿದೆ. ಅಂದರೆ ಟಿಡಿಆರ್ ಫೈಲ್ಗೆ ಸಹಿ ಹಾಕಲು ಒಪ್ಪದ 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾದ ಮುಡಾ ಕಮಿಷನರ್ ಮನ್ಸೂರ್ ಅಲಿ ಬಂಧನದ ಹಿಂದೆಯೂ ವ್ಯವಸ್ಥಿತ ಪಿತೂರಿ ನಡೆದಿರುವುದನ್ನು ಸ್ವತಃ ದೂರುದಾರ ಗಿರಿಧರ್ ಶೆಟ್ಟಿ ಮಾಧ್ಯಮದ ಮುಂದೆ ನೀಡಿದ ಹೇಳಿಕೆಯಲ್ಲಿ ಬಯಲಾಗಿದೆ. ಇದೀಗ ದಲ್ಲಾಳಿ ಸಲೀಂಗೆ ಜಾಮೀನು ದೊರಕಿಸಿಕೊಡಲು ದೂರುದಾರನೇ ಆಗಿರುವ ಗಿರಿಧರ್ ಶೆಟ್ಟಿ ಪ್ರಯತ್ನ ನಡೆಸಿರುವ ಮಾಹಿತಿ ಹೊರಬಿದ್ದಿವೆ. ದಲ್ಲಾಳಿ ಸಲೀಂ ಎಲ್ಲವನ್ನು ತಿಳಿದುಕೊಂಡು ಪಿತೂರಿಯ ಭಾಗವಾಗಿ ಜೈಲಿಗೆ ಹೋಗಲು ಸಿದ್ಧನಾಗಿರುವಂತೆ ಕಂಡು ಬರುತ್ತದೆ. ಅಷ್ಟಕ್ಕೂ ಚುನಾವಣೆ ನೀತಿ ಸಂಹಿತೆ ಸಂದರ್ಭ ಗಿರಿಧರ್ ಶೆಟ್ಟಿ ಹೊಂದಿಸಿದ 25 ಲಕ್ಷ ರೂ.ನ ಮೂಲ ಎಲ್ಲಿಯದು? ಮೂಲ ಜಮೀನಿನ ಮಾಲಕನ ಸಂಬಂಧಿಯೂ ಆಗಿರುವ ದಲ್ಲಾಳಿ ಸಲೀಂ ದೂರುದಾರ ಗಿರಿಧರ್ ಶೆಟ್ಟಿಯ ಪರವಾಗಿ ಆಯುಕ್ತ ಮನ್ಸೂರ್ ಅಲಿಯನ್ನು ಲೋಕಾಯುಕ್ತ ಬಲೆಗೆ ಕೆಡವಿ ಜೊತೆಗೆ ತಾನೂ ಜೈಲಿಗೆ ಹೋಗುವ ತ್ಯಾಗಕ್ಕೆ ಸಿದ್ಧನಾಗಲು ಕಾರಣ ಏನು? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.





