ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ವೆಂಟ್ ನೇತೃತ್ವದಲ್ಲಿ ಧರಣಿ

ಮಂಗಳೂರು: ವಿದೇಶಕ್ಕೆ ಪರಾರಿಯಾಗಿರುವ ಹಾಸನದ ಪೆನ್ಡ್ರೈವ್ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ನನ್ನು ಇಂಟರ್ಪೋಲ್ ನೆರವಿನಿಂದ ಬಂಧಿಸುವಂತೆ ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ವೆಂಟ್ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಹಿಳೆಯರು ನಗರದ ಮಿನಿ ವಿಧಾನ ಸೌಧದ ಬಳಿ ಬುಧವಾರ ಧರಣಿ ನಡೆಸಿದರು.
ಈ ಸಂದರ್ಭ ಮಾತನಾಡಿದ ವಿಮೆನ್ ಇಂಡಿಯಾ ಮೂವ್ವೆಂಟ್ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ನಿಶಾ ವಾಮಂಜೂರು ಅವರು ಅರೆಸ್ಸೆಸ್ನಲ್ಲಿ ಸಿಕ್ಕಿರುವ ಸಂಸ್ಕೃತಿಯ ತರಬೇತಿಯನ್ನು ಬಿಜೆಪಿ ತನ್ನ ಒಕ್ಕೂಟದ ಸದಸ್ಯರಿಗೆ ನೀಡಿದೆ. ಇದರ ಪರಿಣಾಮವಾಗಿ ಮಹಿಳೆಯರು ಭವಿಷ್ಯ ಕಳೆದುಕೊಳ್ಳಬೇಕಾಗಿದೆ. ಇದೇ ಬಿಜೆಪಿಯ ಎನ್ಡಿಎ ಮೈತ್ರಿಕೂಟದ ಜೆಡಿಎಸ್ನ ಸಂಸದ ಪ್ರಜ್ವಲ್ ರೇವಣ್ಣ ಅದೆಷ್ಟೋ ಮಹಿಳೆಯರ ಜೀವನದೊಂದಿಗೆ ಚೆಲ್ಲಾಟವಾಡಿದ್ದಾರೆ. ಅವರನ್ನು ಬಂಧಿಸಲು ಸರಕಾರ ವಿಫಲವಾಗಿದೆ. ಮಾತ್ರವಲ್ಲದೆ ಆತನಿಗೆ ವಿದೇಶಕ್ಕೆ ಪರಾರಿಯಾಗಲು ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಸಹಸ್ರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ಪ್ಲಾಸ್ಟಿಕ್ ಸರ್ಜರ್ ಮಾಡಿಕೊಂಡು ತಪ್ಪಿಸಿಕೊಂಡದ್ದಾ ? ಅಥವಾ ವೇಷ ಬದಲಾಯಿಸಿ ಪರಾರಿಯಾದರೆ ? ಎಂದು ಪ್ರಶ್ನಿಸಿದ ನಿಶಾ ಅವರು ಅದೇ ಪ್ರಜ್ವಲ್ ರೇವಣ್ಣ ಬದಲಾಗಿ ದಾಡಿವಾಲ ಅಥವಾ ಟೋಪಿವಾಲ ಆಗುತ್ತಿದ್ದರೆ ಅಲ್ಲಿನ ಪರಿಸ್ಥಿತಿ ಏನಾಗುತ್ತಿತ್ತು ? ನೇಹಾ ಕೊಲೆಯಾದಾಗ ಆರೋಪಿ ಫಯಾಝ್ ಮುಸ್ಲಿಂ ಎಂಬ ಕಾರಣಕ್ಕಾಗಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಮಹಿಳೆಯರು ಪ್ರಜ್ವಲ್ನ ವಿರುದ್ಧ ಯಾಕೆ ಧ್ವನಿಯೆತ್ತಿಲ್ಲ ?ಫಿಲ್ಮ್ ಡೈಲಾಗ್ ಹೊಡೆದ ಆ ಮಹಿಳಾಮಣಿಗಳು ಈಗ ಎಲ್ಲಿ ಅಡಗಿ ಕುಳಿತಿದ್ದಾರೆ ? ಎಂದು ಪ್ರಶ್ನಿಸಿದರು.
ಇಲ್ಲದ ವಿಡಿಯೋವನ್ನು ಹುಡುಕಾಡಲು ಉಡುಪಿಗೆ ಹೋದ ಪುಷ್ಪಕ್ಕ, ವಿಡಿಯೋ ಇದೆ ಎಂದು ಫ್ರೂಪ್ ಮಾಡಲು ಹೋದ ಶೋಭಕ್ಕ ಎಲ್ಲಿ ? ಇವರ ಹಿಂದುತ್ವ ಈಗ ದನಕಾಯಲು ಹೋಗಿದೆಯೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮದ ಆಧಾರದಲ್ಲಿ ಆರೋಪಿಗಳನ್ನು ಉಳಿಸುವ ಅಳಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ನ್ಯಾಯ ಇಲ್ಲದ ತಾರತಮ್ಯ ತೋರಿಸುವ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುವಂತಾಗಿದೆ. ಈ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ನ್ಯಾಯ ಸಿಗುವುದು ಅಸಾಧ್ಯ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ್ ಅವರು ನೇಹಾ ಕೊಲೆ ಆರೋಪಿ ಫಯಾಝ್ಗೆ 90 ದಿನಗಳಲ್ಲಿ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಸುರ್ಜೆವಾಲರೇ ನೇಹಾಗೆ ಮಾತ್ರವಲ್ಲ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಧರ್ಮಸ್ಥಳದ ಸೌಜನ್ಯ ಕುಟುಂಬಕ್ಕೆ, ವಿಟ್ಲದ ಗೌರಿ, ಅಕ್ಷತಾ , ಬೆಂಗಳೂರಿನ ರುಕ್ಸಾನ ಸೇರಿದಂತೆ ಜೀವ ಕಳೆದುಕೊಂಡ ಬಡ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.
ವಿಮೆನ್ಸ್ ಇಂಡಿಯಾ ಮೂವ್ವೆಂಟ್ ಕರ್ನಾಟಕ ಇದರ ಸದಸ್ಯೆ ಮಿಸ್ರಿಯಾ ಮೈಸೂರು ಮಾತನಾಡಿ ಭಾರತದಲ್ಲಿ ಬಡವರಿಗೊಂದು ನ್ಯಾಯ , ಶ್ರೀಮಂತರಿಗೊಂದು ನ್ಯಾಯ ಎಂಬ ವ್ಯವಸ್ಥೆ ಇದೆ. ಆರೋಪಿ ಪ್ರಜ್ವಲ್ ರೇವಣ್ಣ ಬಿಜೆಪಿ ನೇತೃತ್ವದ ಎನ್ಡಿಎ ಕೂಟದ ಸಂಸದ ಎಂಬ ಕಾರಣಕ್ಕಾಗಿ ಆತನನ್ನು ರಕ್ಷಣೆ ಮಾಡಲಾಗಿದೆ. ಹೆಣ್ಣು ಮಕ್ಕಳ ದೇಹವನ್ನು ತಿಂದು ತೇಗಿದ ಪ್ರಜ್ವಲ್ಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ವಿಮೆನ್ ಇಂಡಿಯಾ ಮೂವ್ವೆಂಟ್ ಕರ್ನಾಟಕ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಶಮಿಮಾ ತುಂಬೆ, ಪುತ್ತೂರಿನ ಅಧ್ಯಕ್ಷೆ ಝಾಹಿದಾ ಸಾಗರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.