ಮಂಗಳೂರು: ಅಪಾಯಕಾರಿ ಮನೆಗಳ ಸರ್ವೆಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಅನಿವಾರ್ಯವಾಗಿ ಇಂತಹ ಇಳಿಜಾರು ಮತ್ತು ತಗ್ಗು ಪ್ರದೇಶದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಇಂತಹ ದುರಂತಗಳಾದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮೊದಲೇ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಪಾಯಕಾರಿ ಮನೆಗಳ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಬುಧವಾರ ತಡೆಗೋಡೆ ಕುಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಮುಖ್ಯಮಂತ್ರಿಯ ವಿಶೇಷ ಸೂಚನೆಯ ಮೇರೆಗೆ ನಾನಿಲ್ಲಿಗೆ ಭೇಟಿ ನೀಡಿದ್ದೇನೆ. ಸ್ಥಳೀಯ ಶಾಸಕರೂ ಆದ ಸ್ಪೀಕರ್ ಯು.ಟಿ.ಖಾದರ್ ಘಟನೆ ನಡೆದ ತಕ್ಷಣ ನನಗೆ ಮಾಹಿತಿ ನೀಡಿದ್ದರು. ಮಳೆಗಾಲದಲ್ಲಿ ಇಂತಹ ಘಟನೆಗಳು ಒಂದಲ್ಲೊಂದು ಕಡೆ ನಡೆಯುತ್ತಲೇ ಇರುತ್ತದೆ. ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳು ಅನಿವಾರ್ಯವಾಗಿ ಆಪಾಯಕಾರಿ ಪ್ರದೇಶ ದಲ್ಲಿ ವಾಸಿಸುವುದು ಸಾಮಾನ್ಯವಾಗಿದೆ. ಇದರಿಂದ ಆಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಅದಕ್ಕಾಗಿ ಅಪಾಯಕಾರಿ ಸ್ಥಳಗಳಲ್ಲಿ ವಾಸವಿರುವ ಕುಟುಂಬಗಳ ಸರ್ವೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ವರದಿ ತಯಾರಿಸಿ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಮುಂಜಾನೆ 3-4ರ ವೇಳೆ ಸಂಭವಿಸಿರಬಹುದು...
ಮಂಗಳವಾರ ರಾತ್ರಿ ಸತತವಾಗಿ ಮಳೆ ಸುರಿದಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗಲಿಲ್ಲ. ನನಗೆ ತಿಳಿದ ಮಾಹಿತಿ ಪ್ರಕಾರ ಬುಧವಾರ ಮುಂಜಾನೆ ಸುಮಾರು 3ರಿಂದ 4ರ ಮಧ್ಯೆ ಈ ಘಟನೆಯು ನಡೆದಿರುವ ಸಾಧ್ಯತೆ ಇದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಕುಟುಂಬದ ನಾಲ್ವರೂ ಮೃತಪಟ್ಟಿದ್ದು, ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಸರಕಾರದ ವತಿಯಿಂದ ಗರಿಷ್ಠ ಮಟ್ಟದ ಪರಿಹಾರ ನೀಡಲು ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.







