ಮಂಗಳೂರು: ಬೀದಿಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ

ಮಂಗಳೂರು: ಬೀದಿ ಬದಿ ವ್ಯಾಪಾರಿಗಳು ದೊಡ್ಡ ಉದ್ಯಮಿಗಳಂತೆ ವ್ಯವಹಾರದ ಕೌಶಲ್ಯ ಪಡೆದವರಲ್ಲ. ಆದರೆ ಅವರು ದೈನಂದಿನ ವ್ಯವಹಾರದ ಅನುಭವದ ಮೂಲಕ ವೃತ್ತಿ ಕೌಶಲ್ಯವನ್ನು ಪಡೆದು ತಮ್ಮ ವೃತ್ತಿಯಲ್ಲಿ ಯಶಸ್ಸು ಗಳಿಸಿದ್ದಾರೆ. ನಗರದ ಅಭಿವೃದ್ಧಿಗೆ ಅವರು ಕೊಡುಗೆ ನೀಡುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ. ರೀಟಾ ನೊರೊನ್ಹಾ ಹೇಳಿದ್ದಾರೆ.
ಬೀದಿಬದಿ ವ್ಯಾಪಾರಸ್ಥರ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ(ರಿ) ಮಂಗಳೂರು ಇದರ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಸುಸ್ಥಿರವಾಗಿ ಬದುಕುವ ಹಕ್ಕು ಇದೆ. ತಮ್ಮ ಹಿತರಕ್ಷಣೆಗಾಗಿ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ಬೀದಿ ವ್ಯಾಪಾರಿಗಳ ಸಂಘಟನೆಯ ಸಂಘಟಿತ ಹೋರಾಟದ ಫಲವಾಗಿ ಬೀದಿ ವ್ಯಾಪಾರಿಗಳ ಪರವಾದ ನಿಯಮ, ಕಾಯ್ದೆ ರೂಪುಗೊಂಡಿದೆ. ಇದು ಸಮಪರ್ಕವಾಗಿ ಜಾರಿಯಾಗಬೇಕಾಗಿದೆ ಎಂದು ಹೇಳಿದರು.
ಬೀದಿ ಬದಿ ವ್ಯಾಪಾರಿಗಳು ದೊಡ್ಡ ವ್ಯಾಪಾರಿಗಳಾಗಿ ಬೆಳೆಯಲು ಮತ್ತು ಬೀದಿ ವ್ಯಾಪಾರಿಗಳ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಅವರಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಂಘಟನೆ ಶ್ರಮಿಸಬೇಕು ಎಂದರು.
ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ನಮ್ಮೊಂದಿಗಿದ್ದಾರೆ.ಅವರು ನಮಗೆ ಪ್ರೇರಣಾ ಶಕ್ತಿ ಆಗಿದ್ದಾರೆ. ಅದೇ ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಲು ಬಲಿಷ್ಟ ಸಂಘಟನೆಯನ್ನು ಕಟ್ಟಿದ ಎಸ್ ಪಿ ಆನಂದ್ ಇದ್ದಾರೆ. ಇಂತಹ ಸಾಧಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಶ್ಲಾಘಿನೀಯ ಎಂದರು.
ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ(ರಿ)ದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಬೀದಿ ಬದಿಯ ಹಿರಿಯ ವ್ಯಾಪಾರಿಗಳಾದ ಶ್ರೀಧರ ಭಂಡಾರಿ,ಆದಮ್ ಬಜಾಲ್ ಮತ್ತು ಮೇರಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಹರೇಕಳ ಹಾಜಬ, ್ಬ ಮಂಗಳೂರು ಮೇಯರ್ ಮನೋಜ್ ಕುಮಾರ್, ಕಾನೂನು ಸಲಹೆಗಾರ ಗದಗದ ವಕೀಲ ಎಂ.ಬಿ.ನದಾಪ್, ನಗರ ಅಭಿಯಾನ ವ್ಯವಸ್ಥಾಪಕ ಎನ್.ಚಿತ್ತರಂಜನ್ , ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ್ ಶುಭ ಹಾರೈಸಿದರು.
ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ(ರಿ)ದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಕೋಶಾಧಿಕಾರಿ ಆಸಿಫ್ ಬಾವಾ ಉಪಸ್ಥಿತರಿದ್ದರು. ಚೇತನ್ ಪಿಲಿಕುಳ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.







