ಕದ್ರಿ ಉದ್ಯಾನವನದಲ್ಲಿ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆ
ಪುಷ್ಪಗಳಿಂದ ನಿರ್ಮಾಣಗೊಂಡ ಐಫೆಲ್ ಟವರ್

ಮಂಗಳೂರು: ನಗರದ ಕದ್ರಿ ಉದ್ಯಾನವನದಲ್ಲಿ ೪ ದಿನಗಳ ಫಲಪುಷ್ಪ ಪ್ರದರ್ಶನ ಗುರುವಾರ ಆರಂಭಗೊಂಡಿದೆ.
ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘ ಮಂಗಳೂರು ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಜ.26ರವರೆಗೆ ಆಯೋಜಿಸಿರುವ
ಫಲಪುಷ್ಪ ಪ್ರದರ್ಶನದಲ್ಲಿ ಐಫೆಲ್ ಟವರ್ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಐಫೆಲ್ ಟವರನ್ನು ಸುಮಾರು 2 ಲಕ್ಷ ಹೂವುಗಳಿಂದ ನಿರ್ಮಿಸಲಾಗಿದ್ದು, ಬಿಳಿ ಹಾಗೂ ನೇರಳೆ ಸೇವಂತಿಗೆ ಹೂವುಗಳಿಂದ ಸುಮಾರು 22 ಅಡಿ ಎತ್ತರ, 12 ಅಡಿ ಸುತ್ತಳತೆಯಲ್ಲಿ ನಿರ್ಮಿಸಲಾಗಿದೆ.
ಸಿರಿ ಧಾನ್ಯ ಮತ್ತು ಅಲಂಕಾರಿಕಾ ಎಲೆಗಳಿಂದ ನಿರ್ಮಿಸಲಾದ ಕಂಬಳದ ಜೋಡಿ ಕೋಣ ಮಾದರಿ, ಯಕ್ಷಗಾನ ವೇಷಧಾರಿಯ ಕಲಾಕೃತಿ, ಮೀನುಗಾರರ ಮತ್ತು ಕಂಬಳ ಓಟಗಾರನ ಕಲಾಕೃತಿ ಸುಂದರವಾಗಿ ಮೂಡಿ ಬಂದಿದೆ. ತರಕಾರಿಗಳಿಂದ ಸುಮಾರು 20000ಕ್ಕಿಂತಲೂ ಅಧಿಕ ಮೂವತ್ತಕ್ಕೂ ಹೆಚ್ಚು ವಿವಿಧ ಜಾತಿಯ ಪುಷ್ಪಗಳ ಜೋಡಣೆ, ತರಕಾರಿ ಕೈ ತೋಟ ಪ್ರಾತ್ಯಕ್ಷಿಕೆಗಳು ನೋಡಬಹುದಾಗಿದೆ.
ಇದರ ಜೊತೆಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಹೂವುಗಳಿಂದ ಅಲಂಕರಿಸಿದ ಪೋಟೋ ಪ್ರೇಮ್, ಸೆಲ್ಫಿ ರೆನ್ ಮಾದರಿ, ಮಶ್ರೂಮ್, ಕೆನನ್ ಬಾಲ್, ಜೇನು ನೊಣ, ಮಿಕಿ ಮೌಸ್ ಗಮನ ಸೆಳೆಯುತ್ತಿದೆ. ಕಲಾಕೃತಿಗಳ ಪ್ರದರ್ಶನ, ನಾನಾ ವಿಧದ 100 ವಿವಿಧ ಸ್ಟಾಲ್‌ಗಳು ಇಲ್ಲಿವೆ.
ದ.ಕ. ಸಂಸದ ಬ್ರಿಜೇಶ್ ಚೌಟ ಅವರು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್ ಕೆ., ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ., ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ., ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಭಟ್, ಬಿ.ಜೆ.ಗಾಂಭೀರ್, ರಾಮ ಮುಗ್ರೋಡಿ, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಡಾ.ನಿರ್ಮಲಾ ಮತ್ತಿತರರು ಉಪಸ್ಥಿತರಿದ್ದರು.







