ಪಂಡಿತ ಪರಂಪರೆಯನ್ನು ಉಳಿಸಿ-ಬೆಳೆಸಲು ಡಾ.ವಿವೇಕ ರೈ ಕರೆ
ಉಡುಪಿ: ಎರಡು ಕೃತಿಗಳ ಲೋಕಾರ್ಪಣೆ

ಉಡುಪಿ, ಜ.24: ಪ್ರಾಚೀನ ಕಾವ್ಯಗಳನ್ನು ಓದಿ, ಅರ್ಥೈಸಬಲ್ಲ, ಅವುಗಳ ವ್ಯಾಖ್ಯಾನ ಬರೆಯಬಲ್ಲ ಪಂಡಿತ ಪರಂಪರೆ ಯನ್ನು ಕನ್ನಡದಲ್ಲಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದು ಖ್ಯಾತ ಜಾನಪದ, ತುಳು ವಿದ್ವಾಂಸ, ವಿಮರ್ಶಕ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.
ಮುದ್ದಣನ 155ನೇ ಜನ್ಮದಿನದ ಸಂದರ್ಭದಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಹಾಗೂ ನಂದಳಿಕೆಯ ಮುದ್ದಣ ಪ್ರಕಾಶನದ ಸಹಯೋಗದಲ್ಲಿ ನಡೆದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಮುದ್ದಣ ಕವಿ ರಚಿತಂ ಶ್ರೀರಾಮಾಶ್ವಮೇಧಂ ಹಾಗೂ ನಂದಳಿಕೆಯ ಐಸಿರಿ ದರ್ಶನ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ನಂದಳಿಕೆ ಕವಿ ಮುದ್ದಣ, ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಂದೂ ಮರೆಯಲಾಗದ ಕವಿ. ಬದುಕಿದ ಕಾಲ ಕಡಿಮೆಯಾ ದರೂ ಕನ್ನಡ ಸಾರಸ್ವತ ಲೋಕಕ್ಕೆ ಅವನ ಕೊಡುಗೆ ಅಪಾರ. ಕನ್ನಡ ಸಾಹಿತ್ಯಕ್ಕೆ ಹೊಸ ಮನ್ವಂತರವನ್ನೇ ಸೃಷ್ಟಿಸಿದ ವನು ಕವಿ ಮುದ್ದಣ. ಭಾಷೆ, ಸಾಹಿತ್ಯ ರಚನೆ, ಹೊಸ ಶೈಲಿ ಮುಂತಾದುವುಗಳಲ್ಲಿ ಅವನ ಕೊಡುಗೆ ಅಪಾರ. ಭಾಷೆಯ ಸಂವಹನ ಶಕ್ತಿಗೆ, ಸಾಹಿತ್ಯದ ಹೊಸರೂಪಕ್ಕೆ ನಾಂದಿ ಹಾಡಿದವನಾದುದರಿಂದ ಅವನ ಕೊಡುಗೆಯನ್ನು ಕನ್ನಡಿಗರು ಎಂದೂ ಮರೆಯಲಾರರು ಡಾ.ರೈ ಹೇಳಿದರು.
ಕೃತಿ ಪರಿಚಯ ಮಾಡಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಮುದ್ದಣನ ಶ್ರೀರಾಮಾಶ್ವಮೇಧಂ ಕೃತಿಗೆ ಸಾರ್ವಕಾಲಿಕ ಮೌಲ್ಯ ಇದ್ದು, ಅದು ಎಂದೂ ಕನ್ನಡ ಸಾಹಿತ್ಯದಿಂದ ಮರೆಯಲಾಗದು. ಮುದ್ದಣನಿಗೆ ಆಯಸ್ಸು ಕಡಿಮೆಯಾದರೂ, ಕೃತಿಗಳ ಮೌಲ್ಯ ಎಂದೂ ಕುಸಿಯದು ಎಂದರು.
ಹಿರಿಯ ಭಾಷಾಂತರಕಾರ, ವಿದ್ವಾಂಸ ಪ್ರೊ.ಎನ್.ಟಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ.ಎಂ. ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಂದಳಿಕೆಯ ಐಸಿರಿ ಕೃತಿಯ ಸಂಪಾದಕ ಕೆ.ಎಲ್. ಕುಂಡಂತಾಯ, ನಂದಳಿಕೆ ಅರಮನೆ ಚಾವಡಿಯ ಸುಹಾಸ್ ಹೆಗ್ಡೆ, ಮೂಲ್ಕಿಯ ಅರಸು ದುಗ್ಗಣ್ಣ ಸಾವಂತರು, ಉಪಸ್ಥಿತರಿದ್ದರು.
ಸಮಾರಂಭದ ಮೊದಲು ನಂದಳಿಕೆ ಶ್ರೀಕಾಂತ ಭಟ್‌ರ ನೇತೃತ್ವದಲ್ಲಿ ಮುದ್ದಣನ ಪುತ್ಥಳಿಗೆ ಮಾಲಾರ್ಪಣೆ ಮಾಡಲಾ ಯಿತು. ಕಂಬಳದ ಕೋಣ ಗಳೊಂದಿಗೆ ಪಲ್ಲಕ್ಕಿಯಲ್ಲಿ ಮುದ್ದಣ ಕೃತಿಯನ್ನು ಮೆರವಣಿಗೆ ಮೂಲಕ ತರಲಾಯಿತು.
ಶ್ರೀರಾಮಾಶ್ವಮೇಧಂ ಕೃತಿ ಸಂಪಾದಕ ಡಾ.ಪಾದೇಕಲ್ಲು ವಿಷ್ಣು ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಆರ್‌ಆರ್‌ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು.







