ದಿನನಿತ್ಯದ ಎಲ್ಲ ಸಮಸ್ಯೆಗಳಿಗೂ ಭಾರತದ ಸಂವಿಧಾನ ದಿವ್ಯೌಷಧಿ: ಸ್ಪೀಕರ್ ಯುಟಿ ಖಾದರ್
ಗಣರಾಜ್ಯೋತ್ಸವ ಅಂಗವಾಗಿ ಎಸ್‌ಕೆ ಎಸ್‌ಎಸ್‌ಎಫ್ ವತಿಯಿಂದ ಮಾನವ ಸರಪಳಿ ಕಾರ್ಯಕ್ರಮ

ಮಂಗಳೂರು: ಭಾರತದ ಸಂವಿಧಾನ ಅದೊಂದು ಗ್ರಂಥ ಮಾತ್ರವಲ್ಲ. ಅದು ಭಾರತೀಯರ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದಿವ್ಯ ಔಷಧಿಯಾಗಿದೆ ಭಾರತೀಯ ಸಂವಿಧಾನ ಎಂದು ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಎಸ್‌ಕೆ ಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಮಂಗಳೂರಿನ ರಾಜಾಜಿ ಪಾರ್ಕ್‌ನಲ್ಲಿ ರವಿವಾರ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗಣರಾಜ್ಯೋತ್ಸವ ಒಂದೇ ದಿನಕ್ಕೆ ಸೀಮಿತವಾಗಿದ್ದಲ್ಲ. ಭಾರತ ಸಾರ್ವಭೌಮ ಗಣರಾಜ್ಯವಾಗಿ ರೂಪುಗೊಳ್ಳಲು ಕೊಡುಗೆ ನೀಡಿದ ಹಿರಿಯರನ್ನು ನೆನಪು ಮಾಡಿಕೊಂಡು ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆಯ ಬಗ್ಗೆ ಚಿಂತನೆ ನಡೆಸುವ ದಿನವಾಗಿದೆ ಎಂದರು.
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಿರ್ಭಯವಾಗಿ ಓಡಾಡಲು ನಮಗೆ ಸಂವಿಧಾನವು ಶಕ್ತಿಯನ್ನು ಕೊಟ್ಟಿದೆ.ನಾವು ಇವತ್ತು ಹಕ್ಕುಗಳ ಮಾತ್ರ ಮಾತನಾಡುತ್ತೇವೆ. ಆದರೆ ಸಂವಿಧಾನದ ಮೂಲಕ ನಮಗೆ ಸಿಕ್ಕಿದ ಹಕ್ಕಿನೊಂದಿಗೆ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಎಸ್‌ಕೆಎಸ್‌ಎಸ್‌ಎಫ್ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಸಂದೇಶವನ್ನು ನೀಡಿದೆ ಎಂದು ನುಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ‘ ಬಹಳ ಸಂತೋಷ ಆಗುತ್ತಿದೆ. ಮರ ದೊಡ್ಡದಾದ ಮೇಲೆ ರಿಪೇರಿ ಮಾಡಲು ಸಾಧ್ಯವಾಗುವುದಿಲ್ಲ. ಗಿಡವಾಗಿದ್ದಾಗ ಸರಿ ಮಾಡಬಹುದು. ಹಾಗೆಯೇ ಮಕ್ಕಳಿಗೆ ಚಿಕ್ಕಂದಿನಲ್ಲೇ ಉತ್ತಮ ಮಾರ್ಗದರ್ಶನ ನೀಡಿದರೆ ಅವರನ್ನು ಉತ್ತಮ ಪ್ರಜೆಗಳಾಗಿ ಸಾಧ್ಯ ಎಂದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರದಲ್ಲಿ ನಾನು ಶಿಕ್ಷಣ ಸಚಿವನಾದ ಬಳಿಕ ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲೂ ಬೆಳಗ್ಗೆ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದುವ ಆದೇಶ ಜಾರಿಯಾ ಗಿತ್ತು. ದೇಶದ ಎಲ್ಲೂ ಇಲ್ಲದ ನಿಯಮವನ್ನು ಕರ್ನಾಟಕದಲ್ಲಿ ಜಾರಿ ಮಾಡಲಾಗಿತ್ತು. ಈಗ ಬಹುತೇಕ ಶಾಲೆಗಳಲ್ಲೂ ನಡೆಯುತ್ತಿದೆ. ಆದರೆ ಕೆಲವು ಶಾಲೆಗಳಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಮಗೆ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯದ ರಕ್ಷಣೆ ಮಾಡಬೇಕಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಕೆಲವು ದಿನಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆ ಅನಾವರಣ ಮಾಡಲಾಗಿತ್ತು. ಮಹಾತ್ಮ ಗಾಂಧಿ 100 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ಮಾಡಿದ್ದರು. 2025 ಅಕ್ಟೋಬರ್ 2ರಿಂದ 25ರ ತನಕ ‘ಗಾಂಧಿ ಭಾರತ’ ಮೂಲಕ ಮಹಾತ್ಮ ಗಾಂಧಿಯನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು. ಗಾಂಧಿ ತತ್ವಾದರ್ಶಗಳಿಂದ ದೂರ ಸರಿದರೆ ನಮ್ಮ ದೇಶಕ್ಕೆ ಅಪಾಯ ತಪ್ಪಿದಲ್ಲ. ಸಂವಿಧಾನವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ನುಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಮಂಗಳೂರಿನಲ್ಲಿ ಎಸ್‌ಕೆಎಸ್‌ಎಸ್‌ಎಫ್ ವತಿ ಯಿಂದ ಆಯೋಜಿಸಲಾಗದ ಮಾನವ ಸರಪಳಿ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಎಲ್ಲರೂ ಒಂದಾಗಿ ದೇಶವನ್ನು ಉಜ್ವಲ ಭವಿಷ್ಯದ ಕಡೆಗೆ ಕೊಂಡುಹೋಗಬೇಕು ಎನ್ನುವುದು ಎಸ್‌ಕೆಎಸ್‌ಎಸ್‌ಎಫ್‌ನ ಧ್ಯೇಯವಾಗಿದೆ ಇದು ಶ್ಲಾಘನೀಯ ಎಂದರು.
ಇದೇ ಸಂದರ್ಭ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಸ್‌ಕೆಎಸ್‌ಎಸ್‌ಎಫ್‌ನ ಸಕ್ರೀಯ ಸದಸ್ಯರಾದ ಜೋಹರ್ ಅಲಿ ಬೋಳಿಯಾರ್ ಮತ್ತು ಮೊಹಮ್ಮದ್ ಸಾಬಿತ್ ತುಂಬೆ ಇವರನ್ನು ಸನ್ಮಾನಿಸಲಾಯಿತು.
ಖ್ಯಾತ ವಾಗ್ಮಿ ಇಕ್ಬಾಲ್ ಬಾಳಿಲ ಪ್ರಧಾನ ಭಾಷಣ ಮಾಡಿದರು. ಎಸ್‌ಕೆ ಎಸ್‌ಎಸ್‌ಎಫ್ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷ ಸಯ್ಯಿದ್ ಅಮೀರ್ ತಂಳ್ ದುವಾ ಮೂಲಕ ಚಾಲನೆ ನೀಡಿದರು.
ಬೆಳಗ್ಗೆ ರಾಜಾಜಿಪಾರ್ಕ್‌ನಲ್ಲಿ ಎಂ.ಎಚ್. ಹಾಜಿ ಅಡ್ಡೂರು ಧ್ವಜಾರೋಹಣ ನೆರವೇರಿಸಿದರು. ಮಾನವ ಸರಪಳಿ ಕಾರ್ಯ ಕ್ರಮಕ್ಕೂ ಮೊದಲು ಬಾವುಟಗುಡ್ಡೆಯ ಮಸೀದಿಯ ವಠಾರದಿಂದ ರಾಜಾಜಿಪಾರ್ಕ್ ತನಕ ದಫ್, ಸ್ಕೌಟ್ ಹಾಗೂ ಫ್ಲವರ್ ಶೋ ಒಳಗೊಂಡ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು.
ಮಾನವ ಸರಪಳಿ ಬಳಿಕ ರಾಜಾಜಿ ಪಾರ್ಕ್‌ನಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಡಾ.ಯು.ಟಿ. ಇಫ್ತಿಕರ್ ಅಲಿ , ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ಅಂತರ್ ಧರ್ಮ ಸಂವಾದ ಆಯೋಗ ಮಂಗಳೂರು ಧರ್ಮ ಪ್ರಾಂತದ ಕಾರ್ಯದರ್ಶಿ ಫಾ. ರಿಚರ್ಡ್ ಡಿ ಸೋಜ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಮುಖ್ಯ ಅತಿಥಿಯಾಗಿದ್ದರು.
ಮಾನವ ಸರಪಳಿ ಸ್ವಾಗತ ಸಮಿತಿಯ ಅಧ್ಯಕ್ಷ ಎನ್.ಕೆ.ಅಬೂಬಕರ್, ಕನ್ವೀನರ್ ಜಲೀಲ್ ಕುದ್ರೋಳಿ, ಎಸ್‌ಕೆ ಎಸ್‌ಎಸ್‌ಎಫ್ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ವರ್ಕಿಂಗ್ ಸೆಕ್ರೆಟರಿ ಬದ್ರುದ್ದೀನ್ ಕುಕ್ಕಾಜೆ, ಜಲೀಲ್ ಕುದ್ರೋಳಿ, ನಿಝಾಮ್ ಫೈಝಿ, ಸದಕತ್ತುಲ್ಲಾ ಫೈಝಿ, ಝೀನತ್ ಬಕ್ಸ್ ಮಸೀದಿಯ ಖತೀಬ್ ಅಬುಲ್ ಅಕ್ರಂ ಬಾಖಾವಿ, ಎಸ್‌ಕೆಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರ, ಕೇಂದ್ರ ಸಮಿತಿಯ ಸದಸ್ಯ ಕಾಸಿಮ್ ದಾರಿಮಿ, ಕುದ್ರೋಳಿ ನಡುಪಳ್ಳಿ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ, ಎಂಎಫ್‌ಸಿ ಮಾಲಕ ಸಿದ್ದೀಕ್ ಮಂಗಳೂರು, ಜಮೀಯ್ಯತುಲ್ ಫಲಾಹ್ ದ.ಕ. ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆಕೆ, ಮನಪಾ ಸದಸ್ಯ ಎಸಿ ವಿನಯ್ ರಾಜ್, ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್ ,ಉದ್ಯಮಿ ರಾಜೇಶ್ ಉಪಸ್ಥಿತರಿದ್ದರು.
ಎಸ್‌ಕೆ ಎಸ್‌ಎಸ್‌ಎಫ್ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸ್ವಾಗತಿಸಿದರು, ಇರ್ಫಾನ್ ಅಸ್ಲಮಿ ಮತ್ತು ಆರಿಫ್ ಬಡಕಬೈಲು, ಉವೈಸಿ ಬಾಂಬಿಲ ಕಾರ್ಯಕ್ರಮ ನಿರೂಪಿಸಿದರು. ನಿಸಾರ್ ಬೆಂಗ್ರೆ ವಂದಿಸಿದರು.