ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ: ಇನ್ನೂ ನಾಲ್ವರ ಬಂಧನಕ್ಕೆ ಮುಂದುವರಿದ ಶೋಧ

ಮಂಗಳೂರು: ಕೋಟೆಕಾರು ಕೆ.ಸಿ. ರೋಡ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಈಗಾಗಲೇ 4 ಮಂದಿ ಆರೋಪಿ ಗಳನ್ನು ಬಂಧಿಸಲಾಗಿದೆ. ಇನ್ನೂ ನಾಲ್ವರು ಪ್ರಮುಖ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಒಟ್ಟು 8 ಮಂದಿ ಆರೋಪಿಗಳಲ್ಲಿ ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿ ಮತ್ತು ಚಿನ್ನಾಭರಣ ಅಡಗಿಸಿಡಲು ಸಹಕರಿಸಿದ್ದ ಷಣ್ಮುಗಂ ಸುಂದರಂನನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಒಬ್ಬಾತ ಶೂಟೌಟ್‌ನಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಷಣ್ಮುಗಂ ಸುಂದರಂ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮುರುಗನ್‌ಗೆ ಕೋಟೆಕಾರು ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿಕೊಟ್ಟ ಶಶಿತೇವರ್ ಸೇರಿದಂತೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ದೋಚಿದ್ದ 18.314ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಲೆಕ್ಕಾಚಾರದ ಪ್ರಕಾರ 360ಗ್ರಾಂ ಚಿನ್ನಾಭರಣ ಇನ್ನೂ ಸಿಕ್ಕಿಲ್ಲ. ದರೋಡೆಯಲ್ಲಿ ಬ್ಯಾಂಕ್‌ನವರ ಲೆಕ್ಕಾಚಾರ ಪ್ರಕಾರ 11,67,044 ರೂ. ದರೋಡೆ ಮಾಡಲಾ ಗಿದ್ದು, ಇದರಲ್ಲಿ 3,80,500 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ 7,86,544 ರೂ. ಮೊತ್ತ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







