ಆಕಸ್ಮಿಕವಾಗಿ ಗುಂಡು ಹಾರಾಟ : ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿಗೆ ಗಾಯ

ಚಿತ್ತರಂಜನ್ ಶೆಟ್ಟಿ
ಮಂಗಳೂರು: ಆತ್ಮರಕ್ಷಣೆಗಾಗಿ ತನ್ನ ಬಳಿ ಇರಿಸಿಕೊಂಡಿದ್ದ ರಿವಾಲ್ವರ್ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಕಾಂಗ್ರೆಸ್ ಮುಖಂಡರೊಬ್ಬರು ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಅನಂತಾಡಿ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಎಂಬವರು ಆಕಸ್ಮಿಕ ಗುಂಡು ಹಾರಾಟದಿಂದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುಂಡು ಹಾರಾಟದಿಂದ ಚಿತ್ತರಂಜನ್ ಶೆಟ್ಟಿ ಅವರ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿ.ಸಿ.ರೋಡ್ನ ನಿವಾಸಿಯಾಗಿರುವ ಚಿತ್ತರಂಜನ್ ಶೆಟ್ಟಿ ಅವರು ತನ್ನ ಪತ್ನಿಯ ತಂಗಿಯ ಮದುವೆಯ ಆಮಂತ್ರಣ ಪತ್ರವನ್ನು ತನ್ನ ಸ್ನೇಹಿತರಿಗೆ ಕೊಡಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಅನಂತಾಡಿಯಲ್ಲಿ ಚಿತ್ತರಂಜನ್ ಶೆಟ್ಟಿ ಅವರ ಸ್ನೇಹಿತರಾದ ಶರಣ್ ಮತ್ತು ಲೋಕೇಶ್ಗೆ ಕಲ್ಲಿನ ಕೋರೆ ಇದೆ. ಅಲ್ಲಿಗೆ ಚಿತ್ತರಂಜನ್ ಶೆಟ್ಟಿ ಮದುವೆಯ ಆಮಂತ್ರಣ ಪತ್ರ ಕೊಡಲು ಹೋಗಿ ಕುಳಿತಿದ್ದಾಗ ಅವರ ಪ್ಯಾಂಟ್ನ ಜೇಬಿನಲ್ಲಿದ್ದ ಗನ್ ಮೇಲೆ ಆಕಸ್ಮಿಕವಾಗಿ ಕೈ ತಾಗಿ ಗುಂಡು ಹಾರಿ ಅವರ ತೊಡೆಗೆ ತಾಗಿ ಹೊರ ಬಂದಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಚಿತ್ತರಂಜನ್ ಶೆಟ್ಟಿ ಅವರು ತನ್ನ ಬಳಿ ಆತ್ಮರಕ್ಷಣೆಗಾಗಿ ಗನ್ ಇರಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
‘‘ಪರವಾನಗಿ ಹೊಂದಿರುವ ಗನ್ನಿಂದ ಆಕಸ್ಮಿಕವಾಗಿ ಗುಂಡು ಹಾರಿ ಚಿತ್ತರಂಜನ್ ಶೆಟ್ಟಿ ಗಾಯಗೊಂಡಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅವರ ತೊಡೆಗೆ(ಮೀನಖಂಡ) ಗಾಯವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ತರಂಜನ್ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ".
-ಯತೀಶ್ ಎನ್, ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ