ಐದು ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದ್ದ ತಡೆ ತೆರವು: ದ.ಕ. ಜಿಲ್ಲಾ ಅಧ್ಯಕ್ಷರಾಗಿ ಅಕ್ಷತಾ ಆದರ್ಶ್ ನೇಮಕ ದೃಢ

ಮಂಗಳೂರು: ದ.ಕ. ಜಿಲ್ಲೆ ಸೇರಿದಂತೆ ಐದು ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗೆ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನೀಡಲಾಗಿದ್ದ ತಡೆಯನ್ನು ತೆರವುಗೊಳಿಸಲಾಗಿದ್ದು, ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯ ಅಧಿಸೂಚನೆಯನ್ನು ಸರಕಾರ ಮತ್ತೆ ಹೊರಡಿಸಿದೆ.
ಬೆಳಗಾವಿ, ಕಲಬುರಗಿ, ಮಂಡ್ಯ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮ ಕಾತಿಯ ಪಟ್ಟಿಯನ್ನು ಸರಕಾರ ಬಿಡುಗಡೆಗೊಳಿಸಿದೆ.
ಕಳೆದ ಸೆಪ್ಟಂಬರ್ 9ರಂದು ರಾಜ್ಯದ 26 ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸರಕಾರ ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು. ಆದರೆ ಅಧಿಸೂಚನೆ ಕುರಿತಂತೆ ಹಲವು ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸೆ.12ರಂದು ಆಡಳಿತಾತ್ಮಕ ಹಿತದೃಷ್ಠಿಯಿಂದ ಅಧಿಸೂಚನೆಯ ಅನುಷ್ಠಾನವನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿತ್ತು.
ಇತ್ತೀಚೆಗೆ 14 ಜಿಲ್ಲೆಗಳ ಸಮಿತಿಯ ನೇಮಕಾತಿ ಅಧಿಸೂಚನೆಯ ತಡೆಯನ್ನು ತೆರವುಗೊಳಿಸಲಾಗಿತ್ತು. ಐದು ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು ಸದಸ್ಯರ ನೇಮಕಾತಿ ಅಧಿಸೂಚನೆಯ ಅನುಷ್ಠಾನಕ್ಕೆ ನೀಡಲಾಗಿದ್ದ ತಡೆಯನ್ನು ತೆರವುಗೊಳಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಸಿ. ಬಲರಾಮ್ ಫೆ.೪ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ದ.ಕ. ಸಮಿತಿಯಲ್ಲಿ ಬದಲಾವಣೆ ಇಲ್ಲ:
ದಕ್ಷಿಣ ಕನ್ನಡ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರಾಗಿ ಮಂಗಳೂರಿನ ನ್ಯಾಯ ವಾದಿ ಅಕ್ಷತಾ ಆದರ್ಶ್ , ಸಮಿತಿಯ ಸದಸ್ಯರಾಗಿ ಹರೀಶ್ ಎಂ ನಾಗುರಿ, ಕಿಶೋರ್ ಕುಂದರ್ ಎಕ್ಕೂರು, ಅಬೂಬಕರ್ ಜಿ ಎನ್, ಹರಿಣಿ ಬಿಕರ್ನಕಟ್ಟೆ ಇವರು ಮತ್ತೆ ನೇಮಕಗೊಂಡಿದ್ದಾರೆ. ಕಳೆದ ಸೆ.9ರಂದು ಹೊರಡಿಸಲಾದ ನೇಮಕಾತಿ ಅಧಿಸೂಚನೆಯಲ್ಲಿ ಇವರೆಲ್ಲರ ಹೆಸರು ಇತ್ತು. ಇವರ ನೇತೃತ್ವದ ಸಮಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನೂತನ ಅಧ್ಯಕ್ಷೆ ಅಕ್ಷತಾ ಆದರ್ಶ್ ಮತ್ತು ಸದಸ್ಯರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ವರದಿ ಮಾಡಿದ್ದಾರೆ. ಪದಗ್ರಹಣ ಮುಂದಿನ ವಾರ ನಡೆಯಲಿದೆ ಎಂದು ಅಕ್ಷತಾ ಆದರ್ಶ್ ತಿಳಿಸಿದ್ದಾರೆ.







