ಡಾ.ವಾಮನ ನಂದಾವರ - ಚಂದ್ರಕಲಾ ದಂಪತಿ, ಡಾ. ಶ್ರೀಕೃಷ್ಣಭಟ್ ರಿಗೆ ಪ್ರತಿಷ್ಠಿತ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ
2024, 2025ನೇ ಸಾಲಿನ ಪ್ರಶಸ್ತಿ ಪ್ರಕಟ

ಡಾ.ವಾಮನ, ಚಂದ್ರಕಲಾ, ಡಾ. ಶ್ರೀಕೃಷ್ಣಭಟ್
ಮಂಗಳೂರು, ಫೆ.15: ಪ್ರತಿಷ್ಠಿತ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣ 2024ನೇ ಸಾಲಿನ ಪ್ರಶಸ್ತಿಗೆ ಹಿರಿಯ ಜಾನಪದ ವಿದ್ವಾಂಸರೂ ವಿಶ್ರಾಂತ ಪ್ರಾಧ್ಯಾಪಕರೂ ಆಗಿರುವ ಡಾ. ವಾಮನ ನಂದಾವರ ಮತ್ತು ವಿಶ್ರಾಂತ ಪ್ರಾಧ್ಯಾಪಕಿ ಚಂದ್ರಕಲಾ ನಂದಾವರ ದಂಪತಿ ಹಾಗೂ 2025ನೇ ಸಾಲಿಗೆ ವಿದ್ವಾಂಸರು, ವಿಶ್ರಾಂತ ಕನ್ನಡ ಪ್ರಾಧ್ಯಾಪಕರೂ ಆಗಿರುವ ಡಾ. ಪಿ. ಶ್ರೀಕೃಷ್ಣಭಟ್ ಆಯ್ಕೆಯಾಗಿದ್ದಾರೆ.
ಪ್ರೊ. ಬಿ. ಎ. ವಿವೇಕ ರೈಯವರ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಮಿತಿಯ ಕಾರ್ಯದರ್ಶಿ ಡಾ.ನರಸಿಂಹಮೂರ್ತಿ ಆರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯ ಮೊತ್ತ ತಲಾ 25,000 ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರೊ. ಬಿ.ಎ. ವಿವೇಕ ರೈ ಅಧ್ಯಕ್ಷತೆಯಲ್ಲಿ ಫೆ.21ರಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಲಿದೆ. ಡಾ. ಸಾಯಿಗೀತ ಅವರು ಡಾ. ವಾಮನ ನಂದಾವರ- ಚಂದ್ರಕಲಾ ನಂದಾವರ ದಂಪತಿಗಳ ಬಗ್ಗೆ ಹಾಗೂ ಡಾ.ಮೀನಾಕ್ಷಿ ರಾಮಚಂದ್ರ ಡಾ.ಪಿ.ಶ್ರೀಕೃಷ್ಣ ಭಟ್ ಇವರ ಬಗ್ಗೆ ಅಭಿನಂದನೆಯ ಮಾತನಾಡಲಿದ್ದಾರೆ. ‘ಅಂಕಿತ ಪುಸ್ತಕ’- ಬೆಂಗಳೂರು ಪ್ರಾಯೋಜಕತ್ವದ ಎಸ್. ವಿ.ಪಿ ಗೀತಗಾಯನ ಕಾರ್ಯಕ್ರಮದಲ್ಲಿ ನಡೆಯಲಿದೆ
ಡಾ. ವಾಮನ ನಂದಾವರ ಇವರು ಜಾನಪದ ವಿದ್ವಾಂಸರು, ಸಂಶೋಧಕರು, ಸುದೀರ್ಘಕಾಲ ಅದ್ಯಾಪಕರಾಗಿ ಶಿಕ್ಷಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅನೇಕ ವಿಶಿಷ್ಠ ಕಾರ್ಯಕ್ರಮಗಳನ್ನು ಯೋಜಿಸಿದವರು. ಕೋಟಿ ಚೆನ್ನಯ ಜಾನಪದೀಯ ಅಧ್ಯಯನ ಒಳಗೊಂಡಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಸ್ವತಂತ್ರ ಕೃತಿಗಳು ಹಾಗೂ 25ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ನೀಡಿದ್ದಾರೆ. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿಯೂ ಒಳಗೊಂಡಂತೆ ಹಲವು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ.
ಚಂದ್ರಕಲಾ ನಂದಾವರ ಇವರು ಮಂಗಳೂರು ಗಣಪತಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕಿಯಾಗಿ, ಪ್ರಾಂಶುಪಾಲ ರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು 15 ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯದ ಮಹಿಳಾ ಸಂಘಟನೆ ಗಳಲ್ಲಿ ಪ್ರಮುಖವಾಗಿರುವ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಆರಂಭದಿಂದಲೂ ಸಕ್ರಿಯವಾಗಿ ತೊಡಗಿಸಿ ಕೊಂಡು ಅಧ್ಯಕ್ಷೆಯಾಗಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಡಾ.ವಾಮನ ನಂದಾವರ- ಚಂದ್ರಕಲಾ ನಂದಾವರ ದಂಪತಿಗಳು ತಮ್ಮ ಹೇಮಾಂಶು ಪ್ರಕಾಶನದ ಮೂಲಕ ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ
ಡಾ. ಪಿ. ಶ್ರೀಕೃಷ್ಣ ಭಟ್ ಗೋವಿಂದದಾಸ ಕಾಲೇಜು, ಸುರತ್ಕಲ್, ಸರಕಾರಿ ಕಾಲೇಜು ಕಾಸರಗೋಡು ಇಲ್ಲಿ ಅಧ್ಯಾಪಕ ರಾಗಿ ಹಾಗೂ ಕಾಸರಗೋಡ್ನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 16 ಎಂಫಿಲ್ ಹಾಗೂ 11 ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಶಾಸನಗಳು ಮತ್ತು ವೀರಗಲ್ಲುಗಳು, ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು ಒಳಗೊಂಡಂತೆ ಹಲವು ಉತ್ಕೃಷ್ಟ ಗ್ರಂಥಗಳನ್ನು ಕನ್ನಡ ಸಾರ ಸ್ವತ ಲೋಕಕ್ಕೆ ನೀಡಿದ್ದಾರೆ. ವೆಂಕಟಾಚಲ ಶಾಸ್ತ್ರಿ ವಿದ್ವತ್ ಪ್ರಶಸ್ತಿ, ಕೇಶವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ವಿದ್ಯಾರ್ಥಿ- ಅಭಿಮಾನಿಗಳು ಇತ್ತೀಚೆಗೆ ಅವರ ‘ಸಹಸ್ರ ಚಂದ್ರ ದರ್ಶನ’ ಸಂದರ್ಭದಲ್ಲಿ ‘ಶ್ರೀಪಥ’ ಎಂಬ ಅಭಿನಂದನ ಗ್ರಂಥ ಸಮರ್ಪಿಸಿದ್ದಾರೆ.







