ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯಿಂದ ನೆರವು: ದ.ಕ. ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸಾ ಸೌಲಭ್ಯ

ಮಂಗಳೂರು: ಪಶು ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಶುಸಂಗೋಪನಾ ಇಲಾಖೆ ದಿಟ್ಟ ಹೆಜ್ಜೆ ಇರಿಸಿದ್ದು, ಜಿಲ್ಲೆಯ ದೊಡ್ಡ ಕಂಪೆನಿಗಳ ಸಿಎಸ್‌ಆರ್ ನಿಧಿಯಿಂದ ನೆರವು ಪಡೆದು ತನ್ನಲ್ಲಿರುವ ಕೊರತೆಯನ್ನು ನಿವಾರಿಸಲು ಮುಂದಾಗಿದೆ.
ಸರಕಾರಕ್ಕೆ ಯಾವುದೇ ಆದಾಯವಿಲ್ಲದ ಮತ್ತು ಕೃಷಿಕರಿಗೆ ಆಪ್ತವಾಗಿರುವ ಪಶು ಆಸ್ಪತ್ರೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವೈದ್ಯರ ಮತ್ತು ಸಿಬ್ಬಂದಿಯ ಕೊರತೆ ಒಂದಡೆಯಾದರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸೂಕ್ತ ಸೌಲಭ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಿಗೆ ನಾನಾ ರೋಗಗಳು ಕಾಣಿಸಿಕೊಳ್ಳುತ್ತಿವೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ಅವುಗಳು ಬೇಗನೆ ಚೇತರಿಸಿಕೊಳ್ಳುತ್ತಿವೆ. ಜಿಲ್ಲಾ ಕೇಂದ್ರಗಳಲ್ಲಿ ಇರುವಷ್ಟು ಸೌಲಭ್ಯಗಳು ತಾಲೂಕು ಆಸ್ಪತ್ರೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳಿಲ್ಲ. ಇಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಆಸಕ್ತಿ ವಹಿಸು ತ್ತಿಲ್ಲ. ಹೀಗಾಗಿ ಇಲಾಖೆಗಳೇ ಸಾರ್ವಜನಿಕರ ಸಹಕಾರದೊಂದಿಗೆ ಕೊರತೆಗಳ ನಿವಾರಣೆಗೆ ಮುಂದಾಗಿದೆ. ಎಂಆರ್‌ಪಿಎಲ್ ಸಂಸ್ಥೆಯು ಸಿಎಸ್‌ಆರ್ ನಿಧಿಯಿಂದ 2024-25ನೇ ದ.ಕ. ಜಿಲ್ಲೆಯ 9 ಪಶು ಆಸ್ತ್ರತ್ರೆಗಳಿಗೆ ಶಸ್ತ್ರ ಚಿಕಿತ್ಸಾ ಪರಿಕರಗಳಿಗೆ ನೆರವು ನೀಡಿದೆ.
2024-25 ನೇ ಸಾಲಿನಲ್ಲಿ ಎಂಆರ್‌ಪಿಎಲ್ ಸಂಸ್ಥೆಯು ದ.ಕ. ಜಿಲ್ಲೆಯ 9 ಪಶು ಆಸತ್ರೆಗಳಿಗೆ 25.83 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಚಾಲಿತ ಹೈಡ್ರಾಲಿಕ್ ಟೇಬಲ್, ನೆರಳುರಹಿತ ದೀಪಗಳು, ಆಪರೇಷನ್ ಟೇಬಲ್, ಎಲೆಕ್ಟ್ರೋ ಕಾಟರಿ, ಆಟೋಕ್ಲೇವ್, ಡ್ರೆಸ್ಸಿಂಗ್ ಟ್ರಾಲಿ ಶಸ್ತ್ರಚಿಕಿತ್ಸಾ ಉಪಕರಣಗಳ ಸೆಟ್‌ನ್ನು ಕೊಡುಗೆಯಾಗಿ ನೀಡಿದೆ.
ಈ ತನಕ ಜಿಲ್ಲಾ ಕೇಂದ್ರವಾಗಿರುವ ಮಂಗಳೂರು ಪಾಲಿಕ್ಲಿನಿಕ್‌ನಲಿ ್ಲ ಮಾತ್ರ ಈ ವ್ಯವಸ್ಥೆ ಇತ್ತು. ಇದೀಗ ತಾಲೂಕು ಮಟ್ಟದಲ್ಲೂ ಈ ವ್ಯವಸ್ಥೆ ಬಂದಿರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ಅನುಕೂಲವಾಗಲಿದೆ. ಈ ಸೌಲಭ್ಯದಿಂದಾಗಿ ಕೃಷಿಕರು ಸ್ಥಳೀಯವಾಗಿ ಜಾನುವಾರು ಹಾಗೂ ಸಾಕು ಪ್ರಾಣಿಗಳ ಶಸ್ತ್ರ ಚಿಕಿತ್ಸಾ ವ್ಯವಸ್ಥೆಯನ್ನು ಸುಲಭವಾಗಿ ಪಡೆಯುಂತಾಗಿದೆ. ಜಿಲ್ಲೆಯ ಕಿನ್ನಿಗೋಳಿ, ಮೂಡಬಿದ್ರೆ, ಸುರತ್ಕಲ್, ಬಜ್ಪೆ, ಬಂಟ್ವಾಳ, ಬೆಳ್ತಂಗಡಿ , ಕಡಬ, ಕೋಟೆಕಾರು ಪಶು ಆಸ್ಪತ್ರೆಗಳಿಗೆ ಶಸ್ತ್ರ ಚಿಕಿತ್ಸಾ ಪರಿಕರನ್ನು ಒದಗಿಸಲಾಗಿದೆ. ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ತಾಲೂಕು ಪಂಚಾಯತ್ ಫಂಡ್‌ನಿಂದ ನಿರ್ಮಿಸಲಾಗಿದ್ದು, ಅಲ್ಲಿಗೆ ಅಗತ್ಯದ ಶಸ್ತ್ರ ಚಿಕಿತ್ಸಾ ಪರಿಕರಗಳನ್ನು ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ನೆರವನ್ನು ಬಳಸಿಕೊಳ್ಳಲಾಗಿದೆ.
ಇತ್ತೀಚೆಗೆ ಸುರತ್ಕಲ್‌ನ ಪಶು ಆಸ್ಪತ್ರೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಎಂಆರ್ ಪಿಎಲ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಪ್ರಶಾಂತ್ ಬಾಳಿಗ ಅವರು ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಅವರಿಗೆ ಹಸ್ತಾಂತರಿಸಿದರು.
‘‘ದ.ಕ.ಜಿಲ್ಲಾ ಪಶುಪಾಲನಾ ಇಲಾಖೆಯು 2022-23ನೇ ಸಾಲಿನಲ್ಲಿ ಎಂಸಿಎಫ್ ಸಂಸ್ಥೆಯ ಸಿಎಸ್‌ಆರ್ ನಿಧಿ ಮೂಲಕ 6 ಲಕ್ಷ ರೂ.ವೆಚ್ಚದಲ್ಲಿ ಹಸು ಎತ್ತುವ ಯಂತ್ರವನ್ನು ಪಡೆಯಲಾಗಿತ್ತು. 2023-24 ರ ಸಾಲಿನಲ್ಲಿ ಕೆನರಾ ಬ್ಯಾಂಕಿನಿಂದ 2 ಲಕ್ಷ ವೆಚ್ಚದಲ್ಲಿ 20 ದ್ರವಸಾರಜನಕ ಜಾಡಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ 4.00 ಲಕ್ಷ ವೆಚ್ಚದಲ್ಲಿ 45 ದ್ರವಸಾರಜನಕ ಜಾಡಿಗಳನ್ನು ಪಡೆಯಲಾಗಿತ್ತು".
-ಡಾ.ಅರುಣ್ ಕುಮಾರ್ ಶೆಟ್ಟಿ, ಉಪ ನಿರ್ದೇಶಕರು , ದ.ಕ. ಜಿಲ್ಲಾ ಪಶು ಸಂಗೋಪನಾ ಇಲಾಖೆಯ







