ಮೀನಾ ಕಾಕೋಡಕರ ಕಥಾ ಸಾಹಿತ್ಯ ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆ

ಮಂಗಳೂರು: ಗೋವಾದ ಸಾಹಿತಿ ದಿ. ಮೀನಾ ಕಾಕೋಡಕರ ಅವರ ನೆನಪಿಗಾಗಿ ವಿಶ್ವ ಕೊಂಕಣಿ ಕೇಂದ್ರ ದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರವನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮೀನಾ ಕಾಕೋಡಕರ ಕಥಾ ಸಾಹಿತ್ಯ, ಮಕ್ಕಳ ನಾಟಕ ಸಾಹಿತ್ಯ ಅದ್ಭುತ ವಾಗಿದೆ. ಅವರ ರಚನೆಯ ನಾಟಕವನ್ನು ಮುಂದಿನ ದಿವಸಗಳಲ್ಲಿ ಮಕ್ಕಳ ಕಾರ್ಯಾಗಾರದಲ್ಲಿ ಅಳವ ಡಿಸಿ, ತರಬೇತಿ ನೀಡಿ ನಾಟಕ ಪ್ರಿಯರಿಗೆ ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಗೋಕುಲದಾಸ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇಂದ್ರ ಸಾಹಿತ್ಯ ಆಕಾಡಮಿಯ ಕೊಂಕಣಿ ವಿಭಾಗದ ಸಂಚಾಲಕ ಮೆಲ್ವಿನ್ ರೊಡ್ರಿಗಸ್ ಮೀನಾರ ಸಾಹಿತ್ಯ ಸೇವೆಯ ಚಿತ್ರಣ ನೀಡಿದರು.
ಸಾಹಿತಿ ಎಚ್.ಎಂ. ಪೆರ್ನಾಳ ಅಧ್ಯಕ್ಷತೆಯಲ್ಲಿ ಮೀನಾ ಕಾಕೋಡಕರ ವಿಮಲಾ ವಿ. ಪೈ ವಿಶ್ವ ಕೊಂಕಣಿ ಪುರಸ್ಕೃತ ವಾಸ್ತು ಕಾದಂಬರಿ ಮೇಲೆ ಚರ್ಚಾಗೋಷ್ಟಿ ನಡೆಯಿತು. ಅನುವಾದಕಿ ಡಾ. ಗೀತಾ ಶೆಣೈ ಬೆಂಗಳೂರು ಮತ್ತು ವಿದ್ಯಾ ಪೈ ಕೋಲ್ಕತ್ತಾ ಅನುಭವ ಹಂಚಿಕೊಂಡರು. ಸಾಹಿತಿ ಮಂಗಳಾ ಭಟ್ ಮಂಗಳೂರು ಉಪಸ್ಥಿತರಿದ್ದರು.
ಮೀನಾ ಕಾಕೋಡಕರ ದೊಂಗರ ಚವಲ್ಲಾ ಕಥಾ ಸಾಹಿತ್ಯದ ಮೇಲೆ ನಡೆದ ಚರ್ಚಾಗೋಷ್ಟಿಯ ಅಧ್ಯಕ್ಷತೆ ಯನ್ನು ಡಾ. ಬಿ ದೇವದಾಸ ಪೈ ವಹಿಸಿದ್ದರು. ಆಕಾಶ ಗಾಂವಕರ ಗೋವಾ ಹಾಗೂ ಆಶ್ಮಾ ಯವುಜಿನ್ ಡಿಸೋಜ ಕಾರ್ಕಳ ಅನುಭವಗಳನ್ನು ಹಂಚಿದರು.
ಸಾಹಿತಿ ವಿದ್ಯಾ ಬಾಳಿಗಾ ಅಧ್ಯಕ್ಷತೆಯಲ್ಲಿ ಮೀನಾ ಕಾಕೋಡಕರ ಸಪನ ಫುಲ್ಲಾಂ ಕಥಾ ಸಂಗ್ರಹದ ಮೇಲೆ ನಡೆದ ಗೋಷ್ಠಿಯಲ್ಲಿ ಸಾಹಿತಿಗಳಾದ ಪ್ರೇಮ್ ಮೊರಾಸ್, ರೆನಿಟಾ ಡಿಕೋಸ್ತ, ಬಿಂದು ಮಾಧವ ಶೆಣೈ, ವಂದನಾ ಡಿಸೋಜ, ಎಡ್ಮಂಡ್ ಜಾರ್ಜ್ ನೊರೊನ್ಹಾ, ಶಾಂತಕುಮಾರ ಭಟ್ ಮಂಗಳೂರು ಪಾಲ್ಗೊಂಡಿದ್ದರು.
ಯುವ ಸಾಹಿತಿ ಕ್ರಿಸ್ಟೋಫರ ಡಿಸೋಜರ ಕಥಾರಂಗ ನಾಟಕ ಪ್ರದರ್ಶನಗೊಂಡಿತು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ವಿಲಿಯಮ್ ಡಿಸೋಜ, ಡಿ. ರಮೇಶ ನಾಯಕ್, ಟ್ರಸ್ಟಿ ಶಕುಂತಲಾ ಆರ್. ಕಿಣಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ ಕಸ್ತೂರಿ ಮೋಹನ ಪೈ ವಂದಿಸಿದರು.







