ಗುಂಪಿನಿಂದ ಹತ್ಯೆ ಪ್ರಕರಣ| ಪೊಲೀಸ್ ಕಮೀಷನರ್ರನ್ನೂ ಅಮಾನತುಗೊಳಿಸಲು ಸಿಪಿಎಂ ಒತ್ತಾಯ
►"ಠಾಣಾಧಿಕಾರಿ ಅಮಾನತು ಗಮನ ಬೇರೆಡೆ ಸೆಳೆಯುವ ಗಿಮಿಕ್" ►ಪ್ರಕರಣದ ತನಿಖೆಗೆ ತಕ್ಷಣ ಎಸ್ಐಟಿ ರಚಿಸಲು ಆಗ್ರಹ

ಮುನೀರ್ ಕಾಟಿಪಳ್ಳ
ಮಂಗಳೂರು: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಕುಡುಪು ಗುಂಪು ಹತ್ಯೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಸ್ಥಳೀಯ ಠಾಣಾಧಿಕಾರಿ ಹಾಗೂ ಕಾನ್ಸ್ಟೇಬಲ್ಗಳ ಅಮಾನತು ಆಕ್ರೋಶಿತ ಜನತೆಯ ಗಮನ ಬೇರೆಡೆಗೆ ಸೆಳೆಯುವ ಸರಕಾರದ ತಂತ್ರವಲ್ಲದೆ ಮತ್ತೇನಲ್ಲ. ಪ್ರಕರಣದ ಕುರಿತು ಠಾಣಾಧಿಕಾರಿಯಷ್ಟೆ ಮಾಹಿತಿ ಪೊಲೀಸ್ ಕಮಿಷನರ್ ಅವರಿಗೂ ಇತ್ತು. ಹಾಗಾಗಿ ಅವರನ್ನೂ ಕೂಡ ಅಮಾನತುಗೊಳಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಕಮಿಷನರ್ ಅವರು ಮಾಧ್ಯಮಗಳು, ರಾಜಕೀಯ ಕಾರ್ಯಕರ್ತರ ಸತತ ಪ್ರಶ್ನೆಗಳಿಗೆ 36 ಗಂಟೆಗಳ ದೀರ್ಘ ಮೌನ ಪಾಲಿಸಿದ್ದೇ ಇದಕ್ಕೆ ಸಾಕ್ಷಿ. ಹೀಗಾಗಿ ಪ್ರಕರಣ ಮುಚ್ಚಿ ಹಾಕುವ ಯತ್ನದ ಆರೋಪದಲ್ಲಿ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಅಮಾನತುಗೊಳಿಸುವುದು ನ್ಯಾಯಯುತ ಕ್ರಮವಲ್ಲ. ಪ್ರಕರಣಕ್ಕೆ ನೇರ ಹೊಣೆಗಾರರಾದ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ರನ್ನೂ ಅಮಾನತುಗೊಳಿಸಿ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ಸಮಾನ ಮನಸ್ಕ ಜನಪರ ಸಂಘಟನೆಗಳನ್ನು ಜೊತೆ ಸೇರಿಸಿ ಹೋರಾಟವನ್ನು ಸಂಘಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹಲ್ಲೆಕೋರರನ್ನು ರಕ್ಷಿಸುವ ಉದ್ದೇಶದಿಂದ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಇಲಾಖೆ ಪ್ರಜ್ಞಾ ಪೂರ್ವಕ ಪ್ರಯತ್ನ ನಡೆಸಿತ್ತು ಎಂಬ ಆರೋಪವನ್ನು ಸರಕಾರ ಕೊನೆಗೂ ಒಪ್ಪಿಕೊಂಡಿದೆ. ಆದರೆ ಈ ಪ್ರಯತ್ನದ ರೂವಾರಿ ಪೊಲೀಸ್ ಕಮಿಷನರ್ ಅವರನ್ನು ರಕ್ಷಿಸುವ ಯತ್ನವನ್ನು ಸರಕಾರ ಮಾಡಿದೆ. ಘಟನೆ ನಡೆದ ದಿನವೆ ಪೊಲೀಸ್ ಕಮಿಷನರ್ಗೆ ಗುಂಪು ಹತ್ಯೆಯ ಮಾಹಿತಿ ದೊರಕಿತ್ತು. ಮಾಧ್ಯಮದ ಪ್ರತಿನಿಧಿಗಳೂ ಈ ಕುರಿತು ಕಮಿಷನರ್ ಬಳಿ ಮಾಹಿತಿ ಕೇಳಿದ್ದರು. ಆದರೆ ಕಮಿಷನರ್ ಉದ್ದೇಶ ಪೂರ್ವಕವಾಗಿ ಮೌನ ವೃತ ಪಾಲಿಸಿದ್ದರು. ಅಲ್ಲದೆ ಘಟನೆ ನಡೆದ ಮಾರನೆಯ ದಿನ ಮುಸ್ಸಂಜೆ ಶವಾಗಾರದಲ್ಲಿ ಮೃತ ದೇಹವನ್ನು ವೀಕ್ಷಿಸಲು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರು, ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ತೆರಳಿದ್ದರು. ಆ ಸಂದರ್ಭ ಸ್ಥಳದಲ್ಲಿದ್ದ ಕಾನೂನು ಸುವ್ಯವಸ್ಥೆ ಡಿಸಿಪಿ ಬಳಿ ಆಳವಾದ ಗಾಯಗಳಿರುವ ಕುರಿತು ಪ್ರಶ್ನಿಸಿದಾಗ ಅದು ತರಚಿದ ಗಾಯ ಎಂದು ಬೇಜವಾಬ್ದಾರಿ ಉತ್ತರ ನೀಡಿ ಅಸಹಜ ಸಾವು ಎಂದು ಯುಡಿಆರ್ ಮಾಡಿರುವುದನ್ನು ಸಮರ್ಥಿಸಿ ಕೊಂಡಿದ್ದರು. ಇದೆಲ್ಲವೂ ಕಮಿಷನರ್ ಕಚೇರಿಗೆ ಘಟನೆಯ ಪೂರ್ತಿ ವಿವರ ಗೊತ್ತಿತ್ತು. ಮುಚ್ಚಿ ಹಾಕುವ ಸಂಚು ನಡೆಯುತ್ತಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಈಗ ಜನಾಕ್ರೋಶ ತೀವ್ರಗೊಂಡು ಪೊಲೀಸ್ ಇಲಾಖೆಯ ಜೊತೆಗೆ ಕಾಂಗ್ರೆಸ್ ಸರಕಾರದ ಮಾನ ಬೀದಿಯಲ್ಲಿ ಹರಾಜು ಆಗುತ್ತಿದೆ. ಇಂತಹ ಜನಾಕ್ರೋಶದಿಂದ ಪಾರಾಗಲು ವಿವಿಧ ಪ್ರಕರಣಗಳಲ್ಲಿ ಹೆಸರು ಕೆಡಿಸಿಕೊಂಡಿರುವ ಗುಂಪು ಹತ್ಯೆಯ ಪ್ರಧಾನ ಆರೋಪಿ ಜೊತೆ ಆತ್ಮೀಯತೆ ಹೊಂದಿದ್ದ ಸ್ಥಳೀಯ ಠಾಣಾಧಿಕಾರಿ ಹಾಗೂ ಕಾನ್ಸ್ಟೇಬಲ್ಗಳನ್ನು ಬಲಿಕೊಟ್ಟು ಜನಾಕ್ರೋಶ ತಣಿಸುವ ಯತ್ನ ನಡೆಸಲಾ ಗಿದೆ. ರಾಜ್ಯವನ್ನಾಳುವ ಪಕ್ಷ ಹಾಗೂ ಜಿಲ್ಲೆಯ ಪ್ರಭಾವಿ ರಾಜಕಾರಣಿಯ ಆಪ್ತ ವಲಯದಲ್ಲಿರುವ ಪೊಲೀಸ್ ಕಮಿಷನರ್ ಅಗರ್ವಾಲ್ ರನ್ನು ರಕ್ಷಿಸುವ ಯತ್ನ ಮಾಡಲಾಗಿದೆ. ಇದನ್ನು ಯಾವುದೆ ಕಾರಣಕ್ಕೂ ಮಂಗಳೂರಿನ ನಾಗರಿಕ ಸಮಾಜ ಒಪ್ಪುವುದಿಲ್ಲ. ಮಂಗಳೂರನ್ನು ಕ್ರೈಂ ಸಿಟಿಯಾಗಿ ಪರಿವರ್ತಿಸಿದ, ದಂಧೆಕೋರರ ಜೊತೆ ಶಾಮೀಲಾಗಿರುವ, ಠಾಣಾಧಿಕಾರಿಗಳನ್ನೂ ಭ್ರಷ್ಟರನ್ನಾಗಿಸಿರುವ, ಮಾಬ್ ಲಿಂಚಿಂಗ್ ಪ್ರಕರಣವನ್ನು ಮುಚ್ಚಿ ಹಾಕಲು ಮೌನ ಸಮ್ಮತಿ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ರನ್ನೂ ತಕ್ಷಣದಿಂದಲೆ ಅಮಾನತುಗೊಳಿಸಬೇಕು ಎಂದು ಸಿಪಿಎಂ ಆಗ್ರಹಿಸಿದ್ದಾರೆ.
ಗುಂಪು ಹತ್ಯೆ ಪ್ರಕರಣದ ತನಿಖೆಯನ್ನು ಕಳಂಕಿತ ಹಿರಿಯ ಅಧಿಕಾರಿಗಳ ದಂಡೇ ತುಂಬಿಕೊಂಡಿರುವ ಮಂಗಳೂರು ಕಮಿಷನರೇಟ್ ಪೊಲೀಸರು ನಡೆಸುವುದು ನೈತಿಕವಾಗಿವಾಗಿ ಸರಿಯಲ್ಲ. ಪ್ರಕರಣದಲ್ಲಿ ನ್ಯಾಯಯುತ ತನಿಖೆಯ ಖಾತರಿಯೂ ಇಲ್ಲ. ಹಾಗಾಗಿ ಪ್ರಕರಣದ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡ ನೇಮಿಸಬೇಕು, ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದ ತನಿಖೆಯನ್ನೂ ಈ ತನಿಖಾ ತಂಡದ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.