ಕೋಮು ವಿರೋಧಿ ಶಕ್ತಿಗಳ ಹುಟ್ಟಡಗಿಸಲು ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್: ಗೃಹ ಸಚಿವ ಡಾ.ಪರಮೇಶ್ವರ

ಮಂಗಳೂರು: ದ.ಕ. ಮತ್ತು ಉಡುಪಿ ಕೋಮುವಾದಿಗಳ ಹುಟ್ಟು ಅಡಗಿಸುವ ನಿಟ್ಟಿನಲ್ಲಿ ಸರಕಾರ ಶ್ರಮಿಸುತ್ತಿದ್ದು, ಈ ಉದ್ದೇಶಕ್ಕಾಗಿ ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರಕಟಿಸಿದರು.
ಯಾರು ಸಮಾಜದಲ್ಲಿ ಕೋಮು ವಿರೋಧಿ ಕೃತ್ಯದಲ್ಲಿ ತೊಡಗುತ್ತಾರೆ ಯಾರು ಪ್ರಚೋದನೆ ನೀಡುತ್ತಾರೆ ಮತ್ತು ಯಾರು ಅವರಿಗೆ ಬೆಂಬಲ ನೀಡುತ್ತಾರೆ. ಅವರ ವಿರುದ್ಧ ಈ ಟಾಸ್ಕ್ ಫೋರ್ಸ್ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ. ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಆ್ಯಂಟಿ ನಕ್ಸಲ್ ಫೋರ್ಸ್‌ನಂತೆ ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿದೆ. ಐಜಿಪಿ ರ‍್ಯಾಂಕ್ ಅಧಿಕಾರಿಗಳು ಹೊಸ ಕಾರ್ಯಪಡೆಯ ಮುಖ್ಯಸ್ಥರಾಗಿರುತ್ತಾರೆ ಎಂದು ವಿವರಿಸಿದರು.
ದ.ಕ.ಜಿಲ್ಲೆ ಮತ್ತು ಉಡುಪಿಯ ಜನರು ಶಾಂತಿಪ್ರಿಯರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕೋಮು ಸೌಹಾರ್ದತೆಗೆ ಸವಾಲಾಗಿದೆ. ಇನ್ನು ಮುಂದೆ ದುಷ್ಟ ಶಕ್ತಿಗಳಿಗೆ ಇಲ್ಲಿ ಅಶಾಂತಿಯ ವಾತಾವರಣ ಮೂಡಿಸಲು ಸರಕಾರ ಅವಕಾಶ ನೀಡುವುದಿಲ್ಲ. ಎರಡು ಜಿಲ್ಲೆಗಳಿಗೆ ಸೀಮಿತವಾಗಿ ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಕಾರ್ಯ ನಿರ್ವಹಿಸಲಿದೆ ಸ್ಥಳೀಯ ಪೊಲೀಸರು ಹೊಸ ಕಾರ್ಯಪಡೆಗೆ ನೆರವಾಗಲಿದ್ದಾರೆ ಎಂದು ವಿವರಿಸಿದರು.
ದ.ಕ. ಜಿಲ್ಲೆಯ ಅಭಿವೃದ್ಧಿಗೆ ಬಂಡವಾಳ ಹೂಡಿಕೆಯಾಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಎರಡು ವರ್ಷಗಳಿಂದ ಎಲ್ಲ ರೀತಿಯ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.
8 ಮಂದಿಯ ಬಂಧನ :
ಕೆಲವು ದಿನಗಳ ಹಿಂದೆ ಕುಡಪುವಿನಲ್ಲಿ ಮುಹಮ್ಮದ್ ಅಶ್ರಫ್‌ನ ಹತ್ಯೆ ಮತ್ತು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಜನರಿಗೆ ಭಯದ ವಾತಾವರಣ ಮೂಡಿದೆ. ಸರಕಾರ ಇದನ್ನು ನಿವಾರಿಸುತ್ತಿದೆ ಎಂದರು
ಸುಹಾಸ್ ಶೆಟ್ಟಿ ಕೊಲೆ ಪ್ರಕರಣಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಅಶ್ರಫ್ ಕೊಲೆ ಪ್ರಕರಣದಲ್ಲಿ 21 ಮಂದಿಯನ್ನು ಬಂಧಿಸಲಾಗಿದೆ. ಅಶ್ರಫ್ ಕೊಲೆಗೆ ಕಾರಣ ಇನ್ನೂ ಗೊತ್ತಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ರೌಡಿ ಶೀಟರ್‌ನ್ನು ನಾವು ಹೀರೋ ಮಾಡಿಲ್ಲ :
ಕೊಲೆಯಾಗಿರುವ ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿಯನ್ನು ನಾವು ಹೀರೊ ಮಾಡಿಲ್ಲ. ಪೊಲೀಸರು ಮಾಡಿಲ್ಲ. ಬಿಜೆಪಿ ಮಾಡಿದೆ. ಬಿಜೆಪಿ ನಾಯಕರಿಗೆ ಇದರ ಬಗ್ಗೆ ಅರಿವು ಇರಬೇಕಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಿಷೇಧಾಜ್ಞೆ ಜಾರಿಯಲ್ಲಿರುವಾಗ ಸುಹಾಸ್ ಮೃತದೇಹದ ಮೆರವಣಿಗೆ ಮಾಡಿರುವ ವಿಚಾರದ ಬಗ್ಗೆ ಗಮನ ಸೆಳೆದಾಗ ಮೃತದೇಹ ಕೊಂಡೊಯ್ಯುವಾಗ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸರು ಬಂದೋ ಬಸ್ತ್ ಮಾಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಡಿಜಿಪಿ ಹಿತೇಂದ್ರ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







