ಶರಣ್ ಪಂಪ್ವೆಲ್ನನ್ನು ತಕ್ಷಣ ಬಂಧಿಸಿ: ಸಿಪಿಐಎಂ ಒತ್ತಾಯ

ಶರಣ್ ಪಂಪ್ವೆಲ್
ಮಂಗಳೂರು, ಮೇ 5: ದ.ಕ.ಜಿಲ್ಲಾ ಬಂದ್ಗೆ ಕರೆ ನೀಡಿ ಕೋಮುಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಶರಣ್ ಪಂಪ್ವೆಲ್ ಮೇಲೆ ಎಫ್ಐಆರ್ ದಾಖಲಿಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಸ್ವಾಗತಿಸಿದೆ. ಶರಣ್ ಪಂಪ್ವೆಲ್ ಸಹಿತ ಇದೇ ಆರೋಪ ಹೊತ್ತ ಪ್ರತಿಯೊಬ್ಬರನ್ನು ಕೂಡ ತಕ್ಷಣ ಬಂಧಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಈ ಹಿಂದೆ ಶರಣ್ ಪಂಪ್ವೆಲ್ ಹಾಗೂ ಇನ್ನಿತರ ಸಂಘಪರಿವಾರದ ನಾಯಕರ ವಿರುದ್ಧ ಕೋಮುದ್ವೇಷ ಕೆರಳಿಸಿದ ಆಪಾದನೆ ಹೊರಿಸಿ ಪ್ರಕರಣ ದಾಖಲಿಸಿ ಸುಮ್ಮನೆ ಬಿಡಲಾಗಿತ್ತು. ಇದು ಉಚ್ಚ ನ್ಯಾಯಾಲಯ ದಲ್ಲಿ ಎಫ್ಐಆರ್ಗೆ ತಡೆಯಾಜ್ಞೆ ತರಲು ಅಥವಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ದ್ವೇಷ ಭಾಷಣಕಾರರಿಗೆ, ಕೋಮು ಹಿಂಸೆ ಪ್ರಚೋದಕರಿಗೆ ಅನುಕೂಲ ಒದಗಿಸಿತ್ತು. ಶರಣ್ ಪಂಪ್ವೆಲ್, ಸೂಲಿಬೆಲೆ ಮತ್ತಿತರರು ಸರಕಾರದ ಈ ಉದಾರ ನಿಲುವಿನ ಲಾಭ ಪಡೆದು ಈ ಹಿಂದೆ ಹಲವು ಬಾರಿ ಪ್ರಕರಣಗಳಿಗೆ ತಡೆಯಾಜ್ಞೆ ತಂದಿದ್ದರು. ಇದು ಸಮಾಜಲ್ಲಿ ಕೋಮು ಹಿಂಸೆಗೆ ಪ್ರಚೋದಿಸುವವರಿಗೆ ಕಾನೂನು, ಸರಕಾರದ ಕುರಿತು ಭಯ ಇಲ್ಲದ ಸ್ಥಿತಿಗೆ ಕಾರಣ ಆಗಿತ್ತು ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಹಾಗಾಗದಂತೆ ಸರಕಾರ ನೋಡಿಕೊಳ್ಳಬೇಕು. ಈಗಾಗಲೆ ಪ್ರಕರಣ ದಾಖಲಾಗಿರುವ ಶರಣ್ ಪಂಪ್ವೆಲ್, ಅರುಣ್ ಕುಮಾರ್ ಪುತ್ತಿಲ ಮತ್ತಿತರ ಸಂಘ ಪರಿವಾರದ ಪ್ರಮುಖರನ್ನು ಕಾಲಾವಕಾಶ ನೀಡದೆ ತಕ್ಷಣ ಬಂಧಿಸಬೇಕು. ಉಚ್ಚ ನ್ಯಾಯಾಲಯದಲ್ಲಿ ಪೊಲೀಸ್ ಇಲಾಖೆ ಕೇವಿಯೆಟ್ ಸಲ್ಲಿಸಿ ಈ ಪ್ರಕರಣದಲ್ಲಿ ಏಕಪಕ್ಷೀಯವಾಗಿ ತಡೆಯಾಜ್ಞೆ ದೊರಕದಂತೆ ನೋಡಿಕೊಳ್ಳಬೇಕು. ಆ ಮೂಲಕ ಕೋಮು ಹಿಂಸಾಚಾರದ ವಿರುದ್ಧ ಸರಕಾರದ ಕ್ರಮಗಳು ಸಾಂಕೇತಿಕ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.







