ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಹರಡಿದ ಆರೋಪ : ಪ್ರಕರಣ ದಾಖಲು

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಕೃತ್ಯಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ವಿಕಾಶ್ ಪಿ.ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರ ಹಳೆಯ ಫೋಟೋ ಬಳಸಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿರುವ ಕುರಿತಂತೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಹುಲ್ ಶಿವಶಂಕರ್ ಎಂಬಾತ ‘ಎಕ್ಸ್’ ಖಾತೆಯಲ್ಲಿ ‘ಕಾಂಗ್ರೆಸ್ ಸರಕಾರ ನೀಡಿದ್ದ 25 ಲಕ್ಷ ರೂ. ಪರಿಹಾರ ಪ್ಯಾಕೇಜ್‌ನಲ್ಲಿ ಆದಿಲ್ 3 ಲಕ್ಷ ರೂ. ಮೊತ್ತವನ್ನು ಸಫ್ವಾನ್‌ಗೆ ಸುಪಾರಿ ನೀಡಿದ್ದಾನೆ’ ಪೋಸ್ಟ್ ಮಾಡಿದ್ದ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓರ್ವನ ವಿಚಾರಣೆ: ‘ಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲ ಈಗ ತೋರಿಸದಿದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ’ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಹಾಕಿದ್ದ ಮನೀಶ್ ಎಂಬಾತನ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಅದನ್ನು ಸೆನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು. ಅದರಂತೆ ತನಿಖೆ ನಡೆಸಿದ ಸೆನ್ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.





