ದುಬೈ: ಕೊಲ್ನಾಡು ನಿವಾಸಿ ಹೃದಯಾಘಾತಕ್ಕೊಳಗಾಗಿ ನಿಧನ

ಮುಲ್ಕಿ : ಕೊಲ್ನಾಡು ನಿವಾಸಿ ಸಫ್ವಾನ್ ( 25) ಎಂಬವರು ದುಬೈಯ ದೇರಾದಲ್ಲಿ ಹೃದಯಾಘಾತಕ್ಕೊ ಳಗಾಗಿ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ವರದಿಯಾಗಿದೆ.
ಕೊಲ್ನಾಡು ನಿವಾಸಿ ಮುಹಮ್ಮದ್ ಮುಸ್ತಫಾ ಮತ್ತು ಝುಬೈದಾ ದಂಪತಿಯ ಪ್ರಥಮ ಪುತ್ರನಾಗಿರುವ ಸಫ್ವಾನ್, ಶನಿವಾರ ಬೆಳಗ್ಗೆ ಕೆಲಸಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ಏಕಾಏಕಿ ಬಿದ್ದಿದ್ದಾರೆ. ಆತಂಕಕ್ಕೊಳಗಾದ ಆತನ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆ ತಲುಪುವಷ್ಟರಲ್ಲೇ ಅವರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೊಷಿಸಿರುವುದಾಗಿ ತಿಳಿದು ಬಂದಿದೆ. ರವಿವಾರ ರಾತ್ರಿ ಮೃತದೇಹವನ್ನು ಕೆ.ಎಸ್. ರಾವ್ ನಗರದ ಖಬರ್‌ಸ್ತಾನದಲ್ಲಿ ದಫನ ಕಾರ್ಯ ನಡೆಯಿತು.
ಮೂರು ತಿಂಗಳಲ್ಲಿ ಊರಿಗೆ ಬರುವವನಿದ್ದ ಸಫ್ವಾನ್:
ಸಫ್ವಾನ್ ಒಂದು ವರ್ಷ ಏಳು ತಿಂಗಳುಗಳಿಂದ ದುಬೈನ ದೇರಾದಲ್ಲಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೂರು ತಿಂಗಳ ಬಳಿಕ ಊರಿಗೆ ಬರುವುದಾಗಿ ತಂದೆ, ತಾಯಿಗೆ ಹೇಳಿದ್ದ. ಹಾಗಾಗಿ ಆತನಿಗೆ ಮದುವೆ ಮಾಡುವ ಉದ್ದೆಶದಿಂದ ಹೆಣ್ಣು ನೋಡಿದ್ದು, ಬಂದ ಬಳಿಕ ಎಂಗೇಜ್ ಮೆಂಟ್ ಮಾಡುವ ಇರಾದೆ ಇತ್ತು ಎಂದು ಸಫ್ವಾನ್ ತಂದೆ ಮುಹಮ್ಮದ್ ಮುಸ್ತಪಾ ವಾರ್ತಾಭಾರತಿಗೆ ತಿಳಿಸಿದ್ದಾರೆ.
ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆ ಆತನ ಜನಾಝವನ್ನು ಊರಿಗೆ ತರಲು ನಿರ್ದರಿಸಲಾಯಿತು. ಆತನ ನೆರೆಹೊರೆಯ ಯುವಕರ ತಂಡ ದುಬೈ ನಲ್ಲಿ ಮೃತಹೇಹ ರವಾನೆಗೆ ಬೇಕಾದ ಕಾಗದಪತ್ರಗಳನ್ನು ತಯಾರಿಸಿ ಮೃತದೇಹವನ್ನು ಭಾರತಕ್ಕೆ ಕರೆತರಲಾಯಿತು. ರವಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣ ಮೂಲಕ ರಾತ್ರಿ 8ರ ಸುಮಾರಿಗೆ ಸಫ್ವಾನ್ ಮೃತದೇಹ ಕೊಲ್ನಾಡು ತಲುಪಿತು ಎಂದು ನೆರೆ ಮನೆ ನಿವಾಸಿ ಮುಹಮ್ಮದ್ ಇಸ್ಮಾಯೀಲ್ ಮಾಹಿತಿ ನೀಡಿದರು.







