ಗುರುವಾಯನಕೆರೆ| ಮುಸ್ಲಿಮರೊಂದಿಗಿನ ವ್ಯವಹಾರಗಳನ್ನು ನಿಲ್ಲಿಸಿ: ಭಾರತಿ ಶೆಟ್ಟಿ
ಸುಹಾಸ್ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆಯಿಂದ ವಿವಾದಿತ ಭಾಷಣ

ಭಾರತಿ ಶೆಟ್ಟಿ
ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಮುಸ್ಲಿಮರೊಂದಿಗೆ ವ್ಯವಹಾರಗಳನ್ನು ನಡೆಸದಂತೆ ಕರೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗುರುವಾಯನಕೆರೆಯ ಬಂಟರ ಭವನದಲ್ಲಿ ಸಾಯಿರಾಮ್ ಫ್ರೆಂಡ್ಸ್ ಗುರುವಾಯನಕೆರೆ ಇದರ ವತಿಯಿಂದ ನಡೆದ ಸುಹಾಸ್ ಶೆಟ್ಟಿ ನುಡಿನಮನ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ ಈ ವಿವಾದಿತ ಭಾಷಣ ಮಾಡಿದ್ದಾರೆ.
"ಯಾವುದೇ ವಸ್ತುಗಳಿಗೆ ದರ ಸ್ವಲ್ಪ ಜಾಸ್ತಿಯಾದರೂ ನಮ್ಮವರ ಅಂಗಡಿಯಲ್ಲಿಯೇ ಖರೀದಿಸಿ ಅದು ಹಿಂದೂ ಸಮುದಾಯಕ್ಕೆ ಶಕ್ತಿ ತುಂಬುತ್ತದೆ. ಅದರಲ್ಲಿ ಒಂದಿಷ್ಟು ಹಣವಾದರೂ ಅವರು ಸಂಘಟನೆಗಳಿಗೂ ನೀಡುತ್ತಾರೆ. ಬಹಳ ಚೆನ್ನಾಗಿ ಮಾತನಾಡುತ್ತಾರೆ ಎಂದು ಅವರ ಮಾತನ್ನು ಕೇಳಿ ಅಲ್ಲಿ ದರ ಕಡಿಮೆಯಿದೆ ಎಂದು ಅವರ ಅಂಗಡಿಗಳಿಗೆ ಹೋಗಬೇಡಿ ನಮ್ಮವರ ಅಂಗಡಿಯಲ್ಲಿಯೇ ಖರೀದಿಸಿ" ಎಂದು ಭಾರತಿ ಶೆಟ್ಟಿ ಕರೆ ನೀಡಿದ್ದಾರೆ.
ಮುಂದುವರಿದು "ಗುರುವಾಯನಕೆರೆ ಪೇಟೆಯಲ್ಲಿ ಅವರ ರಿಕ್ಷಾ ಚಾಲಕರೇ ಹೆಚ್ಚಾಗಿದ್ದಾರೆ. ಬೆಳಗ್ಗಿನ ಜಾವ ಗುರುವಾಯನಕೆರೆಗೆ ಬಂದರೆ ಅಲ್ಲಿ ನಮ್ಮ ರಿಕ್ಷಾ ಚಾಲಕರು ಚಲಾಯಿಸುವ ರಿಕ್ಷಾಗಳೇ ಇರುವುದಿಲ್ಲ ಇದರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹಿಂದೂ ರಿಕ್ಷಾ ಚಾಲಕರು ಒಬ್ಬರಾದರೂ ಬೆಳಗ್ಗಿನ ಜಾವ ಅಲ್ಲಿರಬೇಕು, ಹೀಗೆಲ್ಲ ಹಿಂದೂಗಳನ್ನು ಜಾಗೃತರಾಗಿಸುವ ಮೂಲಕ ಅವರನ್ನು ಕಟ್ಟಿ ಹಾಕಬಹುದೇ ಹೊರತು ಇನ್ಯಾವ ರೀತಿಯಲ್ಲೂ ಅಲ್ಲ" ಎಂದು ಭಾರತಿ ಶೆಟ್ಟಿ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯಮಕೆರೆ ಹಾಗೂ ವಿಶ್ವಹಿಂದೂ ಪರಿಷತ್ತಿನ ಮುಖಂಡ ನವೀನ್ ನೆರಿಯ ಹಾಗೂ ಇತರ ಮುಖಂಡರುಗಳ ಉಪಸ್ಥಿತಿಯಲ್ಲಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ ವಿವಾದಿತ ಭಾಷಣ ಮಾಡಿದ್ದಾರೆ.
ವಿವಾದಿತ ಭಾಷಣ ಮಾಡಿದ ವೀಡಿಯೊ ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಭಾಷಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.







