ಸಜೀಪ | ಅಪಘಾತಕ್ಕೀಡಾಗಿ ಉರುಳಿಬಿದ್ದ ಲಾರಿಗಳು; ಬಿಸಿ ಡಾಂಬರು ಮೈಮೇಲೆ ಬಿದ್ದು ಓರ್ವ ಚಾಲಕ ಮೃತ್ಯು; ಕ್ಲೀನರ್ ಗೆ ಗಂಭೀರ ಗಾಯ

ಬಂಟ್ವಾಳ: ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದ ವೇಳೆ ಒಂದು ಲಾರಿಯಲ್ಲಿದ್ದ ಬಿಸಿ ಡಾಂಬರು ಮೈಮೇಲೆ ಬಿದ್ದು ಲಾರಿ ಚಾಲಕರೊಬ್ಬರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗುರುವಾರ ಸಜೀಪದಲ್ಲಿ ನಡೆದಿದೆ.
ಸಜೀಪ ನಡು ಗ್ರಾಪಂ ಸದಸ್ಯರೂ ಆಗಿರುವ ಸಜೀಪನಡು ಗೋಳಿಪಡ್ಪುನಿವಾಸಿ ರಫೀಕ್(45) ಮೃತಪಟ್ಟವರು. ಅದೇ ಲಾರಿಯ ಕ್ಲೀನರ್ ಯೂಸುಫ್ ಎಂಬವರ ಕೈ ಕಾಲುಗಳ ಮೇಲೂ ಬಿಸಿ ಡಾಂಬರು ಬಿದ್ದಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ಲಾರಿಯ ಚಾಲಕ ರಿಝ್ವಾನ್ ಹಾಗೂ ಅಲ್ಪಾಸ್ ಎಂಬವರಿಗೆ ಅಪಘಾತದಿಂದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಜೀಪದ ಕಂಚಿನಡ್ಕಪದವು ಎಂಬಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ರಫೀಕ್ ಅವರು ಲಾರಿಯಲ್ಲಿ ಕಂಚಿನಡ್ಕಪದವು ಕಡೆಯಿಂದ ಸಜೀಪನಡು ಕಡೆಗೆ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದರು. ಲಾರಿ ಕಂಚಿನಡ್ಕಪದವಿಗೆ ತಲುಪಿದಾಗ ಹಿಂಬದಿಯಿಂದ ಬರುತ್ತಿದ್ದ ಜಲ್ಲಿಮಿಶ್ರಿತ ಬಿಸಿ ಡಾಂಬರು ತುಂಬಿದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಎರಡು ಲಾರಿಗಳು ಆಳೆತ್ತರದಲ್ಲಿದ್ದ ಅಡಿಕೆ ತೋಟಕ್ಕೆ ಉರುಳಿಬಿದ್ದಿವೆ. ಈ ವೇಳೆ ಟಿಪ್ಪರ್ ನಲ್ಲಿದ್ದ ಬಿಸಿ ಡಾಂಬರು ಕೆಂಪು ಕಲ್ಲು ಸಾಗಾಟದ ಲಾರಿ ಚಾಲಕ ರಫೀಕ್ ಅವರ ಮೈ ಮೇಲೆ ಬಿದ್ದಿದೆ. ಇದರಿಂದ ಭಾಗಶಃ ಬೆಂದು ಹೋಗಿದ್ದ ರಫೀಕ್ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಸಜೀಪ ನಡುವಿನಲ್ಲಿ ರಸ್ತೆ ಕಾಮಗಾರಿಗಾಗಿ ಡಾಂಬರು ಮಿಶ್ರಿತ ಜಲ್ಲಿಕಲ್ಲು ಸಾಗಿಸಲಾಗುತ್ತಿತ್ತೆನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಸಂಚಾರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
►ಸ್ಪೀಕರ್ ಸಂತಾಪ:
ಸಜಿಪ ನಡು ಗ್ರಾಪಂ ಸದಸ್ಯ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರೂ ಆಗಿದ್ದ ರಫೀಕ್ ಅವರ ಅಕಾಲಿಕ ನಿಧನಕ್ಕೆ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತೀವ್ರ ಸಂತಾಪ ಸೂಚಿಸಿದ್ದಾರೆ.







