ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಆರೋಪಿಯ ಮೇಲೆ ಹಲ್ಲೆಗೆ ಯತ್ನ
ಮಂಗಳೂರು ಜೈಲಿನಲ್ಲಿ ನಡೆದ ಘಟನೆ

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ನೌಷಾದ್ ಎಂಬಾತನಿಗೆ ನಗರದ ಜೈಲಿನಲ್ಲಿ ಹಲ್ಲೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ ಎಂದು ತಿಳಿದು ಬಂದಿದೆ.
ಆರೋಪಿ ನೌಷಾದ್ ಯಾನೆ ವಾಮಂಜೂರು ನೌಷಾದ್ ಯಾನೆ ಚೊಟ್ಟೆ ನೌಷಾದ್‌ನನ್ನು ಮಂಗಳೂರು ಜೈಲಿನಿಂದ ಮೈಸೂರು ಜೈಲಿಗೆ ಸ್ಥಳಾಂತರಿಸುವ ವೇಳೆ ಇತರೆ ಕೆಲವು ಕೈದಿಗಳು ಕಲ್ಲು ಮತ್ತಿತರ ವಸ್ತುಗಳನ್ನು ಎಸೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಜೈಲಿನ ಸಿಬ್ಬಂದಿಗಳು ಹಲ್ಲೆಯನ್ನು ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನೌಷಾದ್‌ನ ಪೊಲೀಸ್ ಕಸ್ಟಡಿಯು ಇಂದಿಗೆ ಅಂತ್ಯವಾಗಿತ್ತು. ಹಾಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಮೈಸೂರು ಜೈಲಿಗೆ ಸ್ಥಳಾಂತರಿಸುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಜೈಲು ಅಧೀಕ್ಷಕರು ದೂರು: ಸೋಮವಾರ ಸಂಜೆ 6:40ಕ್ಕೆ ಜಿಲ್ಲಾ ಕಾರಾಗೃಹದ ಕ್ವಾರಂಟೈನ್ ಸೆಲ್ ವಿಭಾಗದಲ್ಲಿರುವ ಕೆಲವು ವಿಚಾರಣಾಧೀನ ಕೈದಿಗಳು ತನ್ನ ಕಚೇರಿಯ ಮುಂಭಾಗ ನಿಂತು ಬಿ ಬ್ಯಾರಕ್‌ನಲ್ಲಿರುವ ಕೆಲವು ವಿಚಾರಣಾ ಕೈದಿಗಳನ್ನು ಗುರಾಯಿಸಿ ನೋಡಿದರು ಎಂಬ ಕಾರಣಕ್ಕೆ ಪರಸ್ಪರ ಅವಾಚ್ಯ ಶಬ್ದದಿಂದ ಬೈದಾಡಿಕೊಂಡರು. ಅಲ್ಲದೆ ಸಿಮೆಂಟ್ ಬ್ಲಾಕ್‌ಗಳನ್ನು ಹೊಡೆದು ಅದರ ತುಂಡುಗಳನ್ನು ಎಸೆದಿದ್ದಾರೆ. ಬಿ ಬ್ಯಾರಕ್‌ನ ಮಧ್ಯದ್ವಾರದ ಗೇಟನ್ನು ದೂಡಿ ಹೊರಬಂದು ಕಚೇರಿಯ ಕೋಣೆಗೆ ನುಗ್ಗಿ ಬಾಗಿಲಿನ ಗ್ಲಾಸನ್ನು ಕೈಯಿಂದ ಹೊಡೆದು ಹಾನಿ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಒಬ್ಬ ಕೈದಿಯ ಕಾಲಿಗೆ ಗಾಯವಾಗಿದೆ ಎಂದು ಕಾರಾಗೃಹದ ಅಧೀಕ್ಷಕರು ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







