ಜಮಾಅತ್ ಎ ಇಸ್ಲಾಮಿ ಹಿಂದ್ ನ ಹಿರಿಯ ನಾಯಕ ಕೆ ಎಂ ಶರೀಫ್ ನಿಧನ

ಮಂಗಳೂರು, ಜೂ. 3: ಜಮಾಅತ್ ಎ ಇಸ್ಲಾಮಿ ಹಿಂದ್ ನ ಹಿರಿಯ ನಾಯಕ, ಧಾರ್ಮಿಕ, ಸಾಮಾಜಿಕ ಹಾಗು ಶೈಕ್ಷಣಿಕ ಕ್ಷೇತ್ರದ ಮುಂದಾಳು ಕೆ ಎಂ ಶರೀಫ್ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಸನ್ಮಾರ್ಗ ವಾರಪತ್ರಿಕೆಯನ್ನು ಪ್ರಕಟಿಸುವ ಸನ್ಮಾರ್ಗ ಪಬ್ಲಿಕೇಷನ್ ಟ್ರಸ್ಟ್ ಹಾಗು ಶಾಂತಿ ಪ್ರಕಾಶನ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೆ ಎಂ ಶರೀಫ್ ಅವರು ಶಾಂತಿ ಎಜುಕೇಶನಲ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾಗಿ ಬಬ್ಬುಕಟ್ಟೆಯಲ್ಲಿ ಹಿರಾ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಮತ್ತು ಗೋವಾ ರಾಜ್ಯದ ಸಲಹಾ ಸಮಿತಿ ಸದಸ್ಯರಾಗಿ, ಹಾಸನದ ಮನ್ಸೂರ ಅರಬಿಕ್ ಕಾಲೇಜಿನ ಸ್ಥಾಪಕ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೃದು ಭಾಷಿಕ ಕೆ ಎಂ ಶರೀಫ್ ಸಾಹೇಬರು ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿರುತ್ತಿದ್ದರು. ಜಮಾಅತ್ ಎ ಇಸ್ಲಾಮಿನ ವಿವಿಧ ಸಂಸ್ಥೆಗಳ ಸ್ಥಾಪನೆ ಹಾಗು ನಿರ್ವಹಣೆಯಲ್ಲಿ ಅಪಾರ ಕಾಳಜಿ ವಹಿಸುತ್ತಿದ್ದರು. ಸನ್ಮಾರ್ಗ ವಾರಪತ್ರಿಕೆಯ ಸ್ಥಾಪಕ ಸಂಪಾದಕ, ವಾಗ್ಮಿ, ಚಿಂತಕ ದಿವಂಗತ ಇಬ್ರಾಹೀಮ್ ಸಈದ್ ಅವರು ಶರೀಫ್ ಅವರ ಕಿರಿಯ ಸೋದರರಾಗಿದ್ದರು.
ಅವರು ಪತ್ನಿ, ಐದು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು ಹಾಗು ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ನಗರದ ಕೇಂದ್ರ ಜುಮಾ ಮಸೀದಿಯಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.







