ಮುಲ್ಕಿ: ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಮುಲ್ಕಿ: ದ.ಕ. ಜಿಲ್ಲಾಡಳಿತ, ಜಿಲ್ಲಾ ನಗರ ಅಭಿವೃದ್ಧಿ ಕೋಶ ಮಂಗಳೂರು, ನಗರ ಪಂಚಾಯತ್ ಮುಲ್ಕಿ ಇದರ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಮುಲ್ಕಿ ನಗರ ಪಂಚಾಯತ್ ಮುಂಭಾಗದಲ್ಲಿ ಗಾಂಧಿಮೈದಾನದಲ್ಲಿ ಉದ್ಘಾಟಿಸಿದರು.
ಬಳಿಕ ಪ್ರಜಾಸೌಧದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಲ್ಕಿ ತಾಲೂಕು ಪ್ರಜಾ ಸೌಧಕ್ಕೆ ಅನುದಾನದ ಕೊರತೆ ಎದುರಾಗಿದೆ. ಹಾಗಾಗಿ ಕಟ್ಟಡದ ಒಳಭಾಗದ ಕೆಲವು ಕಾಮಗಾರಿಗಳು ನಡೆಯಲು ಬಾಕಿ ಇವೆ. ಮುಂದಿನ ಜುಲೈ ತಿಂಗಳ ಒಳಗಾಗಿ ಕಾಮಗಾರಿ ನಡೆದು ಉದ್ಘಾಟನೆಗೆ ಸಿದ್ಧಗೊಳ್ಳಿದೆ ಎಂದು ನುಡಿದರು.
ಈ ಸಂದರ್ಭ ಮುಲ್ಕಿ- ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುಲ್ಕಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉಪ ತಹಶೀಲ್ದಾರ್ ನವೀನ್ ಕುಮಾರ್, ಮುಲ್ಕಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಕಿರಣ್ ಶೆಟ್ಟಿ ಕೆರೆಮನೆ, ಕೆಪಿಸಿಸಿ ಸದಸ್ಯ ವಸಂತಗ ಬೇರ್ನಾಡ್ ಮೊದಲಾದವರು ಇದ್ದರು.
ಮುಲ್ಕಿ ಇಂದಿರಾ ಕ್ಯಾಂಟೀನ್ ನಲ್ಲಿ ಜೋಳದ ರೊಟ್ಟಿ, ಪಲ್ಯ ಲಭ್ಯ
ಈ ಭಾಗದಲ್ಲಿ ಉತ್ತರ ಕರ್ನಾಟಕ ಮೂಲದ ಬಹಳಷ್ಟು ಮಂದಿ ಇದ್ದು, ಅವರಿಗೆ ಸಹಕಾರಿಯಾಗುವಂತೆ ಜೋಳದ ರೊಟ್ಟಿ, ಅಕ್ಕಿ ರೊಟ್ಟಿ, ಪಲ್ಯ, ಶೇಂಗ ಚಟ್ನಿ ಮೊದಲಾದವುಗಳನ್ನು ಮುಲ್ಕಿ ಇಂದಿರಾ ಕ್ಯಾಂಟೀನ್‌ನಲ್ಲಿ ನೀಡುವಂತೆ ಮಾಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಮಿಕ ಮುಖಂಡ ಭೀಮಾ ಶಂಕರ್ ಸಚಿವರನ್ನು ಆಗ್ರಹಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಪರ ಜಿಲ್ಲಾಧಿಕಾರಿ ಸಂತೋಷ್ ಅವರನ್ನು ಕರೆದ ಸಚಿವರು, ಗ್ರಾಮಸ್ಥರಿಗೆ ಯಾವ ರೀತಿಯ ಊಟೋಪಹಾರ ಬೇಕೆಂಬು ದನ್ನು ಪಟ್ಟಿ ಮಾಡಿ ಅದರಂತೆ ಆಹಾರ ಮೆನು ತಯಾರಿಸುವಂತೆ ಸೂಚಿಸಿದರು.







