ದ.ಕ. ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ನೇತೃತ್ವದಲ್ಲಿ ಬಿ.ಕೆ.ಹರಿಪ್ರಸಾದ್ ಭೇಟಿ, ಮನವಿ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷರಾದ ಎಮ್.ಎಚ್.ಮೊಹಿದಿನ್ ಹಾಜಿ ಮತ್ತು ನಗರದ ಮಾಜಿ ಮೇಯರ್ ಕೆ.ಅಶ್ರಫ್ ರವರ ನೇತೃತ್ವದ ನಿಯೋಗವು ಇಂದು ಸಂಜೆ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಹಲವು ದಿನಗಳಿಂದ ದುಷ್ಕರ್ಮಿಗಳು ಅಮಾಯಕ ಯುವಕರನ್ನು ವಂಚಿಸಿ ಬರ್ಬರವಾಗಿ ಕೊಲೆ ಮಾಡುತ್ತಿದ್ದು, ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿರುವರನ್ನು ಮತ್ತು ಈ ದುಷ್ಕೃತ್ಯಗಳಿಗೆ ಸಹಕರಿಸುತ್ತಿರು ವವರನ್ನು ಬಂಧಿಸುವುದರೊಂದಿಗೆ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಕೇಳಿಕೊಳ್ಳಲಾಯಿತು. ಅದೇ ರೀತಿ ಕೋಮು ಉದ್ರೇಕ ಭಾಷಣ ಮಾಡುತ್ತಿರುವ ವರನ್ನು ಕೂಡಾ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳಲಾಯ್ತು.
ಅಪರಾಧಿಗಳು ಬಂಧನಕ್ಕೊಳಗಾದ ತಕ್ಷಣವೇ ಜಾಮೀನು ದೊರೆಯುತ್ತಿದ್ದು ಇದರಿಂದಾಗಿ ಇನ್ನಷ್ಟು ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಬಿಗಿ ಕಾನೂನುಗಳನ್ನು ಜಾರಿಗೆ ತಂದು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಮನವಿ ಮಾಡಲಾಯ್ತು.
ಮಾತ್ರವಲ್ಲದೇ ನಾಳೆ ಮುಸಲ್ಮಾನರು ಆಚರಿಸಲಿರುವ ಬಕ್ರೀದ್ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲು ಆಸ್ಪದ ನೀಡದೆ ಬಕ್ರೀದ್ ಸುಸೂತ್ರವಾಗಿ ಆಚರಿಸಲು ಸಹಕರಿಸುವಂತೆ ತಿಳಿಸಲಾಯಿತು.
ಮನವಿಯನ್ನು ಆಲಿಸಿ, ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ನಿಯೋಗಕ್ಕೆ ಭರವಸೆಯನ್ನು ನೀಡಿದರು.
ನಿಯೋಗದಲ್ಲಿ ಅಸೋಸಿಯೇಶನ್ನಿನ ಪ್ರಧಾನ ಕಾರ್ಯದರ್ಶಿ ರಪೀಕ್ ಹಾಜಿ ಕೊಡಾಜೆ, ಉಪಾಧ್ಯಕ್ಷ ರಾದ ಮೆಟ್ರೋ ಸಾಹುಲ್ ಹಮೀದ್ ಹಾಜಿ , ಪತ್ರಿಕಾ ಕಾರ್ಯದರ್ಶಿಗಳಾದ ಇಬ್ರಾಹಿಮ್ ಕೊಣಾಜೆ, ರಿಯಾಝ್ ಹಾಜಿ ಬಂದರ್, ಪದಾಧಿಕಾರಿಗಳಾದ ಎಸ್.ಹುಸೈನಬ್ಬ ಗುಡ್ಡೆಮನೆ, ಕಾಂಗ್ರೇಸ್ ಮುಖಂಡರಾದ ಎಮ್.ಎ. ಗಫೂರ್, ಮಾಜಿ ಕಾರ್ಪೋರೇಟರ್ ರವೂಫ್, ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರೆಂದು ಅಸೋಸಿಯೇಶನ್ ನ ಪತ್ರಿಕಾ ಕಾರ್ಯದರ್ಶಿಗಳಾದ ಇಬ್ರಾಹಿಮ್ ಕೊಣಾಜೆ ಮತ್ತು ರಿಯಾಝ್ ಹಾಜಿ ಬಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.