ಕುಪ್ಪೆಪದವು ನಿವೇಶನ ವಂಚಿತರ ಧರಣಿ ತಾತ್ಕಾಲಿಕ ಸ್ಥಗಿತ: ನಿವೇಶನಕ್ಕೆ ಬದಲಿ ಜಾಗ ಗುರುತು, ಆರು ತಿಂಗಳಲ್ಲಿ ವಿತರಿಸುವ ಭರವಸೆ
ಭರವಸೆ ಈಡೇರದಿದ್ದಲ್ಲಿ ಆ.15ರಿಂದ ಧರಣಿ ಪುನರಾರಂಭಿಸಲು ನಿರ್ಧಾರ

ಬಜ್ಪೆ: ಹಕ್ಕು ಪತ್ರ ಪಡೆದು ನಿವೇಶನ ಸ್ವಾಧೀನ ದೊರಕದೆ ವಂಚನೆಗೊಳಗಾಗಿರುವ ಕುಪ್ಪೆಪದವು ಗ್ರಾಮದ 97 ಕುಟುಂಬಗಳು ಕಳೆದ 11ದಿನಗಳಿಂದ ನಡೆಸುತ್ತಿದ್ದ ಹಗಲು ರಾತ್ರಿ ಧರಣಿಯನ್ನು ತಹಶೀಲ್ದಾರ್ ಭರವಸೆಯ ಹಿನ್ನಲೆಯಲ್ಲಿ ಆ. 15ರವರಗೆ ತಾತ್ಕಾಲಿಕವಾಗಿ ಹಿಂಪಡೆದರು.
ಭರವಸೆ ಈಡೇರದಿದ್ದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿ ಧರಣಿಯನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದರು.
ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ 97 ವಸತಿ ರಹಿತ ಕುಟುಂಬಗಳಿಗೆ ಶಾಸಕ ಭರತ್ ಶೆಟ್ಟಿ 2018ರಲ್ಲಿ ನಿವೇಶನ ತೋರಿಸಿ ಹಕ್ಕು ಪತ್ರ ವಿತರಿಸಿದ್ದರು. ಆದರೆ, ನಿವೇಶನ ಸ್ವಾಧೀನ ನೀಡಿರಲಿಲ್ಲ. ಇದರಿಂದ ಬೇಸತ್ತ ನಿವೇಶನ ರಹಿತರು ಹೋರಾಟ ಸಮಿತಿ ರಚಿಸಿ, ನಿವೇಶನ ಸ್ವಾಧೀನ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಮುಂಭಾಗ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿ ಆರಂಭಿಸಿದ್ದರು. ತಾಲೂಕು ಆಡಳಿತದ ಮನವೊಲಿಕೆಗೆ ಜಗ್ಗದೆ ಧರಣಿ ಮುಂದುವರಿಸಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಒತ್ತಡದ ಮೇರೆಗೆ ಜಿಲ್ಲಾಡಳಿತದ ಸೂಚನೆಯ ಭಾಗವಾಗಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರು ಅಧಿಕಾರಿಗಳ ತಂಡದೊಂದಿಗೆ ಧರಣಿ ಸ್ಥಳಕ್ಕೆ ಆಗಮಿಸಿದ್ದರು. ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ ಈ ಸಂದರ್ಭ ಧರಣಿ ಮಂಟಪದಲ್ಲಿ ಉಪಸ್ಥಿತರಿದ್ದರು.
ದೀರ್ಘ ಮಾತುಕತೆಯ ಬಳಿಕ ನಿವೇಶನ ರಹಿತರ ಹೋರಾಟ ಸಮಿತಿಯ ಪದಾಧಿಕಾರಿಗಳು, ಅಧಿಕಾರಿ ವರ್ಗ ಜೊತೆಯಾಗಿ ನಿವೇಶನ ರಹಿತರಿಗೆ ವಿತರಿಸಲು ಗ್ರಾಮದ ಹಲವು ಕಡೆ ಕಾಯ್ದಿರಿಸಲಾಗಿರುವ ಸರಕಾರಿ ಜಮೀನುಗಳನ್ನು ವೀಕ್ಷಿಸಿದರು. ಸ್ಥಳದಲ್ಲೆ ಪಂಚಾಯತ್ ಅಧಿಕಾರಿಗಳಿಂದ ಮಾಹಿತಿಗಳನ್ನು ಕಲೆ ಹಾಕಿದರು. ಇದರ ಆಧಾರದಲ್ಲಿ ಹಕ್ಕು ಪತ್ರ ಪಡೆದಿರುವ ಫಲಾನುಭವಿಗಳಿಗೆ ಈ ಜಮೀನುಗಳನ್ನು ವಿತರಿ ಸಲು, ತೊಡಕುಗಳನ್ನು ನಿವಾರಿಸಿ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು. ಅಲ್ಲಿಯವರಗೆ ತಾಳ್ಮೆ ವಹಿಸುವಂತೆ ತಹಶೀಲ್ದಾರ್ ವಿನಂತಿಸಿದರು. ಸರಕಾರದ ಮಟ್ಟದಲ್ಲಿ ಈ ಕುರಿತು ಒತ್ತಡ ಹೇರಿ ತಿಂಗಳುಗಳ ಒಳಗಡೆ ನಿವೇಶನ ವಿತರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಇನಾಯತ್ ಅಲಿ ಧರಣಿ ನಿರತರಿಗೆ ಭರವಸೆ ನೀಡಿದರು.
ಈ ಎಲ್ಲದರ ಆಧಾರದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳು ಚರ್ಚೆ ನಡೆಸಿ, ಸಮಿತಿ ಸಂಚಾಲಕ ರಾದ ವಸಂತಿ ಕುಪ್ಪೆಪದವು, ಎಲ್ಲಾ ಅಡಚಣೆಗಳನ್ನು ಬಗೆಹರಿಸಿ ಆರು ತಿಂಗಳ ಒಳಗಡೆ ಹಕ್ಕು ಪತ್ರ ಪಡೆದ ಎಂಬತ್ತು ಕುಟುಂಬಗಳಿಗೆ ನಿವೇಶನ ಸ್ವಾಧೀನ ನೀಡಬೇಕು, ಉಳಿದ 17 ಕುಟುಂಬಗಳಿಗೆ ಈಗಾಗಲೆ ಗುರುತು ಮಾಡಿರುವ ನಿವೇಶನಗಳನ್ನು ಮೊದಲು ನೀಡಿದ ಭರವಸೆಯಂತೆ ಜುಲೈ 15ರ ಒಳಗಡೆ ವಿತರಿಸಬೇಕು. ಈ ಕುರಿತು ಬೆಳವಣಿಗೆಗಳನ್ನು ಹೋರಾಟ ಸಮಿತಿ ಗಮನಿಸಲಿದ್ದು, ನಿವೇಶನ ಸಿದ್ದಪಡಿಸುವ ಕಾರ್ಯ ಭರವಸೆ ನೀಡಿದ ರೀತಿ ನಡೆಯದಿದ್ದಲ್ಲಿ ಆಗಸ್ಟ್ 15ರಂದು ದ್ವಜಾರೋಹಣದ ತರುವಾಯ ಧರಣಿಯನ್ನು ಮರು ಆರಂಭಿಸುವಾಗಿ ಪ್ರಕಟಿಸಿದರು. ಆ ಮೂಲಕ ಧರಣಿಯನ್ನು ತಾತ್ಕಾಲಿಕವಾಗಿ ಕೊನೆಗೊಳಿಸಲಾಯಿತು.
ಧರಣಿ ಮಂಟಪದಲ್ಲಿ ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸಿಪಿಐ ಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ನಿವೇಶನ ರಹಿತರ ಹೋರಾಟ ಸಮಿತಿ ಯ ಸಂಚಾಲಕಿ ವಸಂತಿ ಕುಪ್ಪೆಪದವು, ಸಾಮಾಜಿಕ ಕಾರ್ಯಕರ್ತರಾದ ಬಾವ ಪದರಂಗಿ, ಪೃಥ್ವಿರಾಜ್ ಎಡಪದವು, ಗಿರೀಶ್ ಆಳ್ವ, ಹರಿಯಪ್ಪ ಮುತ್ತೂರು, ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ರಮೇಶ್ ಉಳ್ಳಾಲ್, ಸ್ಥಳೀಯ ಮುಂದಾಳುಗಳಾದ ಸಾಲಿ ಪಾವೂರು, ಸದಾಶಿವ ಕಟ್ಟೆಮಾರ್, ಮಜೀದ್ ಕುಪ್ಪೆಪದವು, ಕುಸುಮ ಬೊಲಿಯ, ವಾರಿಜ ನೀಲಿ, ಮಹಮ್ಮದ್ ನಾಸಿರ್, ಅಶ್ರಫ್ ಆಚಾರಿ ಜೋರ, ಮುಬೀನ್, ಜಮೀಲ ಮಾಣಿಪಳ್ಳ, ರಜಿಯಾ ಮಾಣಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.