ಮಂಗಳೂರು| ಗುಂಪು ಹತ್ಯೆ ಪ್ರಕರಣ: ಮೂವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

(ಅಶ್ರಫ್)
ಮಂಗಳೂರು, ಜೂ.12: ನಗರ ಹೊರವಲಯದ ಕುಡುಪುವಿನಲ್ಲಿ ಎ.27ರಂದು ನಡೆದ ವಯನಾಡಿನ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಜಾಮೀನು ಅರ್ಜಿ ಗುರುವಾರ ತಿರಸ್ಕೃತಗೊಂಡಿದೆ.
ನೀರುಮಾರ್ಗದ ಸಾಯಿದೀಪ್, ಪದವು ಗ್ರಾಮದ ಜ್ಯೋತಿನಗರದ ಅನಿಲ್ ಕುಮಾರ್, ಕುಲಶೇಖರದ ಯತಿರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳೂರಿನ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಜಗದೀಶ್ ವಿ.ಎನ್. ತಿರಸ್ಕರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಮಂದಿಯನ್ನು ಬಂಧಿಸಿದ್ದರು. ಆ ಪೈಕಿ ಈವರೆಗೆ 6 ಮಂದಿಗೆ ಜಾಮೀನು ಲಭಿಸಿದ್ದರೆ, 6 ಮಂದಿಯ ಜಾಮೀನು ಅರ್ಜಿ ತಿರಸ್ಕೃತಗೊಂಡಿವೆ. ಆರೋಪಿಗಳ ಪೈಕಿ 5 ಮಂದಿ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ. ಉಳಿದ ನಾಲ್ಕು ಮಂದಿಯ ಅರ್ಜಿಯು ಜೂ.18ಕ್ಕೆ ವಿಚಾರಣೆಗೆ ಬರಲಿದೆ.
ಮೇ 31ರಂದು ಆರೋಪಿಗಳಾದ ರಾಹುಲ್ ಮತ್ತು ಕೆ.ಸುಶಾಂತ್, ಜೂ.4ರಂದು ಸಂದೀಪ್, ದೀಕ್ಷಿತ್, ಸಚಿನ್, ಜೂ.6ರಂದು ಆದರ್ಶ್ ಪಂಡಿತ್ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದರೆ, ಆರೋಪಿಗಳಾದ ಪ್ರದೀಪ್, ಮನೀಶ್ ಶೆಟ್ಟಿ, ಅನಿಲ್ ಕುಮಾರ್ ಜಾಮೀನು ಕೋರಿ ಹೈಕೋರ್ಟ್ನ ಮೆಟ್ಟಲೇರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇರೆಗೆ ಇನ್ಸ್ಪೆಕ್ಟರ್ ಸಹಿತ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು.





