ಇರಾನ್ - ಇಸ್ರೇಲ್ ಯುದ್ಧ | ಶಾಂತಿಯ ವಾತಾವರಣಕ್ಕೆ ಭಾರತ ಮಧ್ಯಸ್ಥಿಕೆ ವಹಿಸಬೇಕು: ಎ.ಪಿ.ಉಸ್ತಾದ್

ಎ.ಪಿ. ಉಸ್ತಾದ್
ಕಲ್ಲಿಕೋಟೆ: ಯುದ್ಧದ ವಿಸ್ತರಣೆಯ ವಿರುದ್ಧವಾಗಿ ಮಾನವ ಸಮೂಹವು ಒಗ್ಗಟ್ಟಿನಿಂದ ಪ್ರತಿರೋಧಿಸಬೇಕು ಎಂದು ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್ (ಎ.ಪಿ. ಉಸ್ತಾದ್) ಹೇಳಿದರು.
ಕಲ್ಲಿಕೋಟೆಯ ಮರ್ಕಝ್ನಲ್ಲಿ ನಡೆದ ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪಶ್ಚಿಮ ಏಷ್ಯಾದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಇಸ್ರೇಲ್ ಕೈಗೊಂಡಿರುವ ಕ್ರಮಗಳು ಮನುಷ್ಯ ವಿರೋಧಿ ಯಾಗಿವೆ. ಯುದ್ಧದ ವಿಸ್ತರಣೆ ಭಾರತ ಸೇರಿದಂತೆ ಇಡೀ ಜಗತ್ತಿಗೆ ದುಷ್ಪರಿಣಾಮ ಬೀರುತ್ತದೆ. ಅಂತಾರಾಷ್ಟ್ರೀಯ ಒಪ್ಪಂದಗಳಿಗೂ ಮಾನವೀಯ ಮೌಲ್ಯಗಳಿಗೂ ಒತ್ತು ನೀಡದೆ ನಡೆಯುತ್ತಿರುವ ಇಸ್ರೇಲ್ ನೆತನ್ಯಾಹು ಸರಕಾರ ಆಧುನಿಕ ಜಗತ್ತಿಗೆ ನಾಚಿಕೆಯ ವಿಷಯವಾಗಿದೆ ಎಂದು ಎ.ಪಿ.ಉಸ್ತಾದ್ ಹೇಳಿದರು.
ಲಕ್ಷಾಂತರ ಭಾರತೀಯರ ಉದ್ಯೋಗದ ಪ್ರದೇಶವೇ ಪಶ್ಚಿಮ ಏಷ್ಯವಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ನಡೆಯುವ ಸಂಘರ್ಷ ಭಾರತಕ್ಕೆ ನೇರವಾಗಿ ಸಂಬಂಧಿಸಿದೆ. ಇನ್ನು ಮುಂದೆ ಯುದ್ಧದ ಸಂಕೀರ್ಣತೆ ಹೆಚ್ಚಿಸದೆ ಶಾಂತಿಯ ಕಡೆಗೆ ಜವಾಬ್ದಾರಿಯುತ ನಡೆಯ ಮೂಲಕ ಭಾರತ ಮುಂದಾಗಬೇಕು. ಭಾರತಕ್ಕೆ ಇಸ್ರೇಲ್ ಮತ್ತು ಇರಾನ್ನೊಂದಿಗೆ ನಿಕಟ ಸಂಬಂಧವಿರುವುದರಿಂದ ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಬೇಕು. ಗಾಝಾದಲ್ಲಿ ಶಾಂತಿ ಪುನಃಸ್ಥಾಪನೆಯಲ್ಲಿಯೂ ಭಾರತ ತನ್ನ ಪಾತ್ರವನ್ನು ಚುರುಕಾಗಿ ನಿರ್ವಹಿಸಬೇಕು ಎಂದು ಎ.ಪಿ. ಉಸ್ತಾದ್ ಹೇಳಿದರು.







