ಹೊಸದಿಲ್ಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ| ಕರ್ನಾಟಕದಿಂದ ಮೈ ಭಾರತ್‌ನ ಯುವ ರಾಯಭಾರಿಯಾಗಿ ಶ್ರೀಕಾಂತ್ ಪೂಜಾರಿ ಆಯ್ಕೆ

ಪುತ್ತೂರು, ಜೂ.18: ಹೊಸದಿಲ್ಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮೈ ಭಾರತ್‌ನ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲು ಪುತ್ತೂರು ತಾಲೂಕಿನ ಶ್ರೀಕಾಂತ್ ಪೂಜಾರಿ ಬಿರಾವು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.
ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಮೈ ಭಾರತ್ (ನೆಹರೂ ಯುವ ಕೇಂದ್ರ) ವತಿಯಿಂದ ದೇಶದ ಪ್ರತಿ ರಾಜ್ಯದಿಂದ 15ರಿಂದ 28 ವರ್ಷ ವಯೋಮಿತಿವರೆಗಿನ ಯುವ ಜನರನ್ನು ಆಯ್ಕೆ ಮಾಡುತ್ತಿದ್ದು, ಕರ್ನಾಟಕದಿಂದ ಈ ಬಾರಿ ಶ್ರೀಕಾಂತ್ ಬಿರಾವು ವಿಶೇಷ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ನೆಹರು ಯುವ ಕೇಂದ್ರ ಮಂಗಳೂರಿನ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಹಾಗೂ ಆಡಳಿತಾಧಿಕಾರಿ ಜಗದೀಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶ್ರೀಕಾಂತ್ ಬಿರಾವು ಹಲವು ವರ್ಷಗಳಿಂದ ಯುವ ಜನರ ಸಬಲೀಕರಣದಲ್ಲಿ ತೊಡಗಿಸಿಕೊಂಡಿದ್ದು ಯುವ ತರಬೇತುದಾರರಾಗಿ ರಾಜ್ಯಾದ್ಯಂತ 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ. ತೊಂಬತ್ತು ಸಾವಿರ ಯುವಜನರಿಗೆ ಜೀವನ ಕೌಶಲ, ವೃತ್ತಿ ಮಾರ್ಗದರ್ಶನ, ನಾಯಕತ್ವ ಮತ್ತು ಉದ್ಯಮಶೀಲತಾ ತರಬೇತಿಯಲ್ಲದೆ ಶಾಲಾ ಕಾಲೇಜು, ಯುವಕ ಯುವತಿ ಮಂಡಲದ ಸದಸ್ಯರಿಗೆ ತರಬೇತಿ ನೀಡಿದ್ದಾರೆ.
ದ.ಕ.ಜಿಲ್ಲೆಯಲ್ಲಿ 13 ಉದ್ಯೋಗ ಮೇಳವನ್ನು ಅಯೋಜಿಸಿ ಹಲವಾರು ಯುವಜನರಿಗೆ ಉದ್ಯೋಗಕ್ಕೆ ನೇರವಾಗಿದ್ದಾರೆ. ಸಾಮಾಜಿಕ ಜಾಲತಾಣ, ಮಾದಕ ವ್ಯಸನದ ಕುರಿತಾಗಿ ಹಳ್ಳಿ ಹಳ್ಳಿಗಳಿಗೆ ತೆರಳಿ ಕಾರ್ಯಕ್ರಮ ಅಯೋಜಿಸಿದ್ದಾರೆ. ಭಾರತ ಸರಕಾರ ಮತ್ತು ರಾಜ್ಯ ಸರಕಾರದ ಹಲವು ಯುವಜನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಂಘಿಟಿಸಿದ್ದಾರೆ.
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಯೂತ್ ಚಾಂಪಿಯನ್ ಆಗಿ ಭಾಗವಹಿಸಿದ್ದ ಶ್ರೀಕಾಂತ್ ಬಿರಾವು ಕರ್ನಾಟಕ ಮತ್ತು ಕೇರಳದ ಕಾರ್ಯಕ್ರಮಗಳ ತೀರ್ಪುಗಾರರಾಗಿದ್ದಾರೆ. ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂನ ಜೀವನ ಕೌಶಲ ಮತ್ತು ಉದ್ಯಮಶೀಲತಾ ತರಬೇತುದಾರರಾಗಿದ್ದಾರೆ.
ಸಾಹಿತ್ಯ ಸಮ್ಮೇಳನ, ಕವಿಗೊಷ್ಠಿಗಳಲ್ಲಿ ಭಾಗವಹಿಸಿದ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ರಾಜ್ಯ ಸರಕಾರದಿಂದ ರಾಜ್ಯ ಅತ್ಯುತ್ತಮ ಜೀವನ ಕೌಶಲ ಸುಗಮಕಾರ ಪ್ರಶಸ್ತಿ, ರಾಜ್ಯ ಯುವಜನ ಒಕ್ಕೂಟದಿಂದ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ, ಮಾಮ್ ಇನ್ಸ್‌ಫೈರ್ ಆವಾರ್ಡ, ರಾಜ್ಯ ಸಾಧನಶ್ರೀ ಪ್ರಶಸ್ತಿ, ಸಾಹಿತ್ಯ ಸರಸ್ಪತಿ ಬಿರುದು ಲಭಿಸಿದೆ.
ಬಪ್ಪಳಿಗೆ ರಾಗಿಕುಮೇರಿ ದ.ಕ.ಜಿಪ ಹಿಪ್ರಾ ಶಾಲೆಯಲ್ಲಿ ಪ್ರಾಥಮಿಕ, ಕೊಂಬೆಟ್ಟಿನಲ್ಲಿ ಫ್ರೌಢ ಮತ್ತು ಪದವಿ ಪೂರ್ವ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ, ಮಂಗಳೂರು ವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.







