ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಜಯರಾಜ್ ಆಯ್ಕೆ

ಮಂಗಳೂರು, ಜೂ.20: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ ಹಾಗು ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯ ಮಾರ್ಗದರ್ಶನದಲ್ಲಿ ಶುಕ್ರವಾರ ನಡೆಯಿತು.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ, ಕ್ಷೇತ್ರಾಡಳಿತ ಸಮಿತಿಯನ್ನು ಪುನ: ರಚಿಸಲಾಯಿತು. ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸಾಹುಕಾರ್ ಕೊರಗಪ್ಪಅವರ ಮೊಮ್ಮಗ ಜಯರಾಜ್ ಎಚ್. ಸೋಮಸುಂದರಂ (ಎಚ್.ಎಸ್.ಜಯರಾಜ್) ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಊರ್ಮಿಳಾ ರಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಾಧವ ಸುವರ್ಣ, ಕೋಶಾಧಿಕಾರಿಯಾಗಿ ಪದ್ಮರಾಜ್ ಆರ್. ಪೂಜಾರಿ, ಸಮಿತಿಯ ಸದಸ್ಯರಾಗಿ ಎಚ್.ಎಸ್.ಸಾಯಿರಾಂ, ಸಂತೋಷ್ ಜನಾರ್ದನ ಪೂಜಾರಿ, ಜಗದೀಶ್ ಸುವರ್ಣ, ಕೃತಿನ್ ಅಮೀನ್, ಕಿಶೋರ್ ದಂಡಕೇರಿ ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಅಭಿವೃದ್ಧಿ ಸಮಿತಿಯನ್ನು ಪುನರ‌್ರಚಿಸಿ 51 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಮಾಜದ ಸಂಘಟನೆ ಹಾಗು ಬ್ರಹ್ಮಶ್ರೀ ನಾರಾಯಣ ಗುರುಗಳ ಕ್ರಾಂತಿಗೆ ಪೂರಕವಾಗಿ ಕಾರ್ಯಕ್ರಮ ಆಯೋಜಿಸುವಂತೆ ಬಿ.ಜನಾರ್ದನ ಪೂಜಾರಿಯವರು ನಿರ್ದೇಶನ ನೀಡಿದರು.







