ಕ್ಷಣಿಕ ಸುಖಕ್ಕಾಗಿ ದುಶ್ಚಟಗಳಿಗೆ ಬಲಿಯಾಗದಿರಿ: ರವಿಚಂದ್ರ ನಾಯಕ್

ರವಿಚಂದ್ರ ನಾಯಕ್
ಮಂಗಳೂರು,ಜೂ.23: ಪೌರ ಕಾರ್ಮಿಕರು ಕ್ಷಣಿಕ ಸುಖಕ್ಕಾಗಿ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಹೇಳಿದ್ದಾರೆ.
ಉರ್ವಸ್ಟೋರ್ನ ಅಂಬೇಡ್ಕರ್ ಭವನದಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಂಬಾಕು ನಿಯಂತ್ರಣ ಕೋಶ ಮಂಗಳೂರು ಮಹಾನಗರ ಪಾಲಿಕೆ, ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜು, ಇಂಡಿಯಾನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ಸಹಯೋಗದಲ್ಲಿ ಸೋಮವಾರ ಪೌರಕಾರ್ಮಿಕರಿಗೆ ನಡೆದ ಉಚಿತ ಬಾಯಿ ಆರೋಗ್ಯ ತಪಾಸಣೆ ಹಾಗೂ ಅಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳಿಗೆ ದಾಸರಾಗುವುದರಿಂದ ಕುಟುಂಬದ ಸುಖ ಶಾಂತಿ ನೆಮ್ಮದಿಯನ್ನು ಹಾಳು ಮಾಡುವು ದರೊಂದಿಗೆ ಸಮಾಜದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಳಜಿಯನ್ನು ವಹಿಸಿಕೊಳ್ಳುವುದರೊಂದಿಗೆ ಆರೋಗ್ಯಯುತ, ನೆಮ್ಮದಿಯುತ ಜೀವನ ನಡೆಸಿ ಎಂದು ಕರೆ ನೀಡಿದರು.
ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ಚಂದ್ರ ಕುಲಾಲ್, ತಂಬಾಕು ಸೇವನೆಯ ಸಾಧಕ ಬಾಧಕಗಳ ಕುರಿತು ಮಾಹಿತಿ ನೀಡಿದರು.
ತಂಬಾಕು ಸೇವನೆಯ ಚಟವನ್ನು ಬಿಡಿಸುವ ಸಲುವಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಯನ್ನು ನೀಡುವ ಬಗ್ಗೆ ಮಾಹಿತಿ ನೀಡಿದರು.
ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪುಂಡಲೀಕ ಲಕಾಟಿಯವರು ದೈನಂದಿನ ಜೀವನದಲ್ಲಿ ಯೋಗದ ಮಹತ್ವದೊಂದಿಗೆ ಪೌರಕಾರ್ಮಿಕರಿಗೆ ಸರಳವಾದ ರೀತಿ ಯೋಗಾಸನಗಳನ್ನು ಮಾಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿ ಡಾ.ದಿಶಾ ಭಾಗವಹಿಸಿ ದಂತ ಆರೋಗ್ಯ ಹಾಗೂ ಬಾಯಿ ಆರೋಗ್ಯದ ಬಗ್ಗೆ ಪೌರ ಕಾರ್ಮಿಕರಿಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಡಾ.ಮಂಜಯ್ಯ ಶೆಟ್ಟಿ ಮಹಾನಗರಪಾಲಿಕೆ ಆರೋಗ್ಯಾಧಿಕಾರಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ದಂತ ವೈದ್ಯ ಡಾ.ಮುಶಾಕಿರ್ ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ.ಕೆ ಉಳೆಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







