ಪುತ್ತೂರು: ನೀಟ್ ನಲ್ಲಿ ಸಾಧನೆ ಮಾಡಿದ ʼಕಮ್ಯೂನಿಟಿ ಸೆಂಟರ್ʼನ ವಿದ್ಯಾರ್ಥಿಗಳಿಗೆ ಅಲ್ ಮುಝೈನ್ ವತಿಯಿಂದ ವಿದ್ಯಾರ್ಥಿ ವೇತನ
► ಲಾಂಗ್ ಟರ್ಮ್ ನೀಟ್ ಮಾಡುವ 50 ವಿದ್ಯಾರ್ಥಿಗಳಿಗೆ ಭಾರತ್ ಇನ್ಫೋಟೆಕ್ ವಿದ್ಯಾರ್ಥಿ ವೇತನ

ಪುತ್ತೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಫಲಿತಾಂಶ ಆಧಾರಿತ ಸೇವೆ ಎಲ್ಲರಿಗೂ ಮಾದರಿ, ನಿರಂತರ ವೀಕ್ಷಣೆಯ ಮೂಲಕ ವಿದ್ಯಾರ್ಥಿಗಳನ್ನು ಗುರಿ ತಲುಪಿಸುವ ಸೆಂಟರ್ ನ ಪ್ರಯತ್ನದಲ್ಲಿ ನಾವು ಜೊತೆ ಇರುತ್ತೇವೆ ಎಂದು ಖ್ಯಾತ ಉದ್ಯಮಿ, ಅಲ್ ಮುಝೈನ್ ಮಾಲಕರಾದ ಝಕರಿಯಾ ಹಾಜಿ ಜೋಕಟ್ಟೆ ಹೇಳಿದರು.
ಸೆಂಟರ್ ನ ಕೌನ್ಸಿಲಿಂಗ್ ಹಾಗೂ ವಿದ್ಯಾರ್ಥಿವೇತನ ಪಡೆದು ವಿವಿಧ ಕೋಚಿಂಗ್ ಸೆಂಟರ್ ನಲ್ಲಿ ಕಲಿತು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮಗೆ ಸಮಾಜ ನೀಡುವ ಕೊಡುಗೆಗಳನ್ನು ಸ್ಮರಿಸುತ್ತಾ ಮುಂದೆ ನೀವು ಸಮಾಜಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯ ಗುರುತಿಸಿ ಅವರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಾಡುವ ಕಮ್ಯೂನಿಟಿ ಸೆಂಟರ್ ಈ ಬಾರಿಯ ನೀಟ್ ನಲ್ಲಿ ಅತ್ಯುತ್ತಮ ಫಲಿತಾಂಶ ತಂದಿರುವುದು ಎಲ್ಲರಿಗೂ ಮಾದರಿ, ಮುಂದಿನ ನೀಟ್ ಲಾಂಗ್ ಟರ್ಮ್ ಗೆ ರಾಜ್ಯದ ಯಾವುದೇ ಭಾಗದಲ್ಲೂ ತಯಾರಿ ನಡೆಸುವ 50 ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನ ಭಾರತ್ ಇನ್ಫೋಟೆಕ್ ಮೂಲಕ ನೀಡಲಿದ್ದೇವೆ ಎಂದು ಸಂಸ್ಥೆಯ ಮಾಲಕರಾದ ಎಸ್.ಎಂ. ಮುಸ್ತಾಫಾ ಹೇಳಿದರು.
ಎಲ್ಲಾ ಧರ್ಮೀಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ಡಾ. ಮೋಹನ್ ಆಳ್ವಾ ಅವರು ತಮ್ಮ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ ನೀಟ್ ತರಬೇತಿ ಸಂಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆ ನೀಡುವುದಾಗಿ ನನಗೆ ಭರವಸೆ ನೀಡಿದ್ದು, ಅದರಂತೆ ಆಳ್ವಾಸ್ ನಲ್ಲಿ ನೀಟ್ ಕಲಿಯಲು ಆಸಕ್ತಿ ಇರುವವರು ಕಮ್ಯೂನಿಟಿ ಸೆಂಟರನ್ನು ಸಂಪರ್ಕಿಸಲು ವಿನಂತಿಸಿದರು.
ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ 2025ರ ನೀಟ್ ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೈಕಿ ಸರಕಾರಿ ಮೆಡಿಕಲ್ MBBS ಸೀಟು ಪಡೆದ ಪ್ರತಿ ವಿದ್ಯಾರ್ಥಿಗೆ 50 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಅಲ್ ಮುಝೈನ್ ಸಂಸ್ಥೆ ನೀಡಲಿದೆ ಎಂದು ಅದರ ಮಾಲಕರಾದ ಝಕರಿಯಾ ಹಾಜಿ ಜೋಕಟ್ಟೆ ಘೋಷಿಸಿದರು.
ಒಂದು ಕಾಲದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮಸ್ಯೆ ಮತ್ತು ಸವಾಲುಗಳನ್ನು ಹೇಳಲು ಒಂದು ಸ್ಥಳ ಇರಲಿಲ್ಲ. ಈಗ ಕಮ್ಯೂನಿಟಿ ಸೆಂಟರ್ ಮಕ್ಕಳ ಭವಿಷ್ಯಕ್ಕೆ ನೆರಳಾಗಿ ನಿಂತಿದೆ. ಮಕ್ಕಳು ಧೈರ್ಯವಾಗಿ ತಮ್ಮ ಆಸಕ್ತಿ ಮತ್ತು ಕನಸನ್ನು ಇಲ್ಲಿ ಹೇಳಿಕೊಳ್ಳಬಹುದು. ಅವರನ್ನು ಸಾಧನೆಯ ಎತ್ತರಕ್ಕೆ ಬೆಳೆಸಲು ಸೆಂಟರ್ ಅವರಿಗೆ ಬೆಂಬಲವಾಗಿ ನಿಂತಿದೆ. ಅದರ ಫಲಿತಾಂಶ ನಮ್ಮ ಮುಂದಿದೆ ಎಂದು ಡಾಕ್ಟರ್ ಸಿದ್ದೀಕ್ ಅಡ್ಡೂರು ರವರು ಸೆಂಟರ್ ನ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
ಡೆಲ್ಟಾ ಗ್ರೂಪ್ ನ ಮಾಲಕರಾದ ಅಹ್ಮದ್ ಮೊಹಿದ್ದೀನ್, ಮಾಡರ್ನ್ ಗ್ರೂಪ್ ನ ಮಾಲಕರಾದ ಮುಷ್ತಾಕ್, ಪ್ರೊಸೆರ್ವ್ ಗ್ರೂಪ್ ನ ಮಾಲಕರಾದ ಸತ್ತಾರ್ ಅವರು ಸೆಂಟರ್ ನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಅಗತ್ಯಕ್ಕೆ ಅನುಸಾರ ನೀಡಲಿದ್ದೇವೆ ಎಂದು ತಿಳಿಸಿದರು.
ಸೆಂಟರ್ ಮೂಲಕ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕ್ಷೇತ್ರದಲ್ಲಿ ಕಲಿಯುತಿದ್ದು ಇನ್ನಷ್ಟೂ ಪ್ರೋತ್ಸಾಹ ಎಲ್ಲರೂ ನೀಡಬೇಕು ಎಂದು ಝಕರಿಯಾ ಹಾಜಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾರತ ಇನ್ಫೋಟೆಕ್ ನ ನಿರ್ದೇಶಕರಾದ ಝಿಯಾ ಎಸ್.ಎಂ., ಬಿ.ಸಿ.ಎಸ್.ಎಫ್ ನ ಇಕ್ಬಾಲ್, ಬಿ.ಎಸ್.ವಿ.ಟಿ ಯ ಪ್ರಾದೇಶಿಕ ನಿರ್ದೇಶಕರಾದ ಇಮ್ತಿಯಾಜ್ ಭಾಗವಹಿಸಿದ್ದರು.







