ಬ್ಯಾರಿ ಮಹಿಳೆಯರು ಬಾಹ್ಯ ಪ್ರಪಂಚಕ್ಕೆ ತೆರೆದುಕೊಂಡಾಗ ಸಬಲೀಕರಣ ಸಾಧ್ಯ: ಖಾಲಿದ್ ಉಜಿರೆ

ಮಂಗಳೂರು: ಬ್ಯಾರಿ ಸಮುದಾಯದ ಮಹಿಳೆಯರು ಧಾರ್ಮಿಕ ಶ್ರದ್ಧೆಯೊಂದಿಗೆ ಬಾಹ್ಯ ಪ್ರಪಂಚಕ್ಕೆ ತೆರೆದುಕೊಂಡಾಗ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಶಕ್ತಿ ತುಂಬಿದಂತಾಗುತ್ತದೆ ಇದಕ್ಕೆ ಪುರುಷ ಸಮಾಜದ ಬೆಂಬಲ ಅತೀ ಅವಶ್ಯ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು. ಎಚ್.ಖಾಲಿದ್ ಉಜಿರೆ ಹೇಳಿದರು.
ಅಖಿಲ ಭಾರತ ಬ್ಯಾರಿ ಪರಿಷತ್‌ನ ಬ್ಯಾರಿ ಮಹಿಳಾ ಘಟಕವು ನಗರದ ನ್ಯಾಷನಲ್ ಟ್ಯುಟೋರಿಯಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಮಹಿಳಾ ಆರೋಗ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ.ತಫ್ಸಿಯಾ ಖಾದರ್ ಆರೋಗ್ಯ ಮಾಹಿತಿ ನೀಡಿ ಮಾರಕ ಕಾಯಿಲೆಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಮತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರ ನೀಡಿದರು.
ಬ್ಯಾರಿ ಮಹಿಳಾ ಘಟಕಾಧ್ಯಕ್ಷೆ ಶಮೀಮಾ ಕುತ್ತಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಸಲಹೆಗಾರರಾದ ಇಬ್ರಾಹಿಂ ನಡುಪದವು, ನಿಸಾರ್ ಮುಹಮ್ಮದ್ ಫಕೀರ್ ಶುಭ ಹಾರೈಸಿದರು.
ಲೇಖಕಿಯರಾದ ಮರಿಯಮ್ ಇಸ್ಮಾಯಿಲ್, ಆಯಿಶಾ ಯು.ಕೆ., ಬ್ಯಾರಿ ಪರಿಷತ್ ಸದಸ್ಯ ಅಬ್ಬಾಸ್ ಬಿಜೈ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಮೀಝಾ ಎಂ.ಬಿ. ಸ್ವಾಗತಿಸಿದರು. ಝುಲೈಖಾ ಮುಮ್ತಾಝ್ ಕಿರಾಅತ್ ಪಠಿಸಿದರು. ಕೋಶಾಧಿಕಾರಿ ಸೌದಾ ಉಳಾಯಿಬೆಟ್ಟು ವರದಿ ವಾಚಿಸಿದರು. ಸದಸ್ಯೆ ರಮ್ಲತ್ ವಂದಿಸಿದರು. ಉಪಾಧ್ಯಕ್ಷೆ ಅಸ್ಮತ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.







