ಪದವು ಸಹಕಾರಿ ಸಂಘದ ಗುಮಾಸ್ತ ನಗ-ನಗದಿನೊಂದಿಗೆ ಪರಾರಿ ಪ್ರಕರಣ: ಸಮರ್ಪಕ ತನಿಖೆಗೆ ಸುದರ್ಶನ ಜೈನ್ ಆಗ್ರಹ

ಮಂಗಳೂರು: ಶಕ್ತಿನಗರದ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಗುಮಾಸ್ತನೊಬ್ಬ 6.5 ಕೆ.ಜಿ. ಬಂಗಾರ ಮತ್ತು ನಗದಿನೊಂದಿಗೆ ಪರಾರಿಯಾದ ಪ್ರಕರಣದ ಬಗ್ಗೆ ಪೊಲೀಸರು ಮತ್ತು ಸಹಕಾರಿ ಇಲಾಖೆ ಸಮರ್ಪಕ ತನಿಖೆ ನಡೆಸುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಸಹಕಾರಿ ಸಮಿತಿಯ ಅಧ್ಯಕ್ಷ ಸುದರ್ಶನ್ ಜೈನ್ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಕರಣ ನಡೆದು ಒಂದು ತಿಂಗಳು ಕಳೆದರೂ, ತೊಂದರೆ ಗೊಳಗಾದ ಸದಸ್ಯರಿಗೆ ಪರಿಹಾರ ಸಿಕ್ಕಿಲ್ಲ. ಸಂಘದ ಮೇಲೆ ವಿಶ್ವಾಸವಿರಿಸಿ ಚಿನ್ನವಿಟ್ಟಿರುವ ಗ್ರಾಹಕರ ಹಿತಕಾಯಬೇಕಾಗಿರುವುದು ಆಡಳಿತ ಮಂಡಳಿ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಹಕಾರಿ ಸಂಘದಲ್ಲಿ ನಡೆದಿರುವ ಈ ಅವ್ಯವಹಾರ , ಹಗಲು ದರೋಡೆ ಪ್ರಕರಣದಿಂದಾಗಿ ಸಹಕಾರಿ ಸಂಘಗಳ ಬಗ್ಗೆ ಜನಸಾಮಾನ್ಯರು ನಂಬಿಕೆ ಮತ್ತು ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ದ.ಕ. ಸಂಘದಲ್ಲಿ ಜನರು ಸಹಕಾರಿ ಸಂಘಗಳ ಬಗ್ಗೆ ವಿಶ್ವಾಸ ಕಳೆದುಕೊಂಡು ಅವರು ಇಟ್ಟಿರುವ ನಗ-ನಗದನ್ನು ಹಿಂಪಡೆ ಯತೊಡಗಿದರೆ, ದ.ಕ. ಜಿಲ್ಲೆಯಲ್ಲಿ ಹಲವು ಸಹಕಾರಿ ಸಂಘಗಳ ಭವಿಷ್ಯ ಮಸುಕಾಗಬಹುದು ಎಂದು ಎಚ್ಚರಿಸಿದರು.
ಪದವು ಸಹಕಾರಿ ಸಂಘದಲ್ಲಿ ಠೇವಣಿ, ಚಿನ್ನ ಅಡವಿಟ್ಟು ತೊಂದರೆಗೊಳಗಾದವರಿಗೆ 15 ದಿನಗಳಲ್ಲಿ ಪರಿಹಾರ ಒದಗಿಸಲು ಆಡಳಿತ ಸಮಿತಿ ಮತ್ತು ಸಿಇಒ ಗಮನ ಹರಿಸಬೇಕು ಎಂದರು.
ಪದವು ಸಹಕಾರಿ ಸಂಘದ ಶಾಖಾ ಕಚೇರಿಯಲ್ಲಿ ಬಡ ಮತ್ತು ಮಧ್ಯಮವರ್ಗದವರು ಅಡವಿರಿಸಿದ ಬಂಗಾರ ಮತ್ತು ಠೇವಣಿಯ ದುರುಪಯೋಗಕ್ಕೆ ನಗದು ಗುಮಾಸ್ತನಿಗೆ ಅವಕಾಶ ನೀಡಿದ ಮತ್ತು ಕರ್ತವ್ಯ ಲೋಪ ಎಸಗಿದ ಶಾಖಾ ಪ್ರಬಂಧಕರು ಕೂಡಾ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಮಹಿಳಾ ಸಿಬ್ಬಂದಿ ಒಬ್ಬರೂ ಶಾಮೀಲಾಗಿದ್ದಾರೆ ಎಂದು ಸಂಘದ ಮಾಜಿ ಉಪಾಧ್ಯಕ್ಷ ಸುಧಾಕರ ಜೋಗಿ ಆರೋಪಿಸಿದರು.
ನಗನಗದನ್ನು ದೋಚಿದ ಪ್ರಕರಣದ ಬಗ್ಗೆ ಪೊಲೀಸರಿಗೆ ಕಾರ್ಯನಿರ್ವಹಣಾಧಿಕಾರಿ ದೂರು ನೀಡುವ ಬದಲು, ಪ್ರಕರಣದಲ್ಲಿ ಶಾಮೀಲಾಗಿರುವ ಗುಮಾನಿ ಹೊಂದಿರುವ ಶಾಖಾ ಪ್ರಬಂಧಕರು ದೂರು ನೀಡಿರು ವುದು ನಾನಾ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಶಾಖಾ ಪ್ರಬಂಧಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಸುಧಾಕರ ಜೋಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯೆ ಶಂಪಾ ಎಸ್, ಕಾಂಗ್ರೆಸ್ ಧುರೀಣರಾದ ಯಶವಂತ ಪ್ರಭು, ಪ್ರೇಮಾ ಬಳ್ಳಾಲ್‌ಬಾಗ್, ಗಿರೀಶ್ ಶೆಟ್ಟಿ, ಉದಯ ಆಚಾರ್ ಉಪಸ್ಥಿತರಿದ್ದರು.







