ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆ: ಆರೆಂಜ್ ಅಲರ್ಟ್ ಘೋಷಣೆ

ಮಂಗಳೂರು: ಕರಾವಳಿಯಾದ್ಯಂತ ಸೋಮವಾರವೂ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಸಂಜೆ ವೇಳೆ ಬೆಳ್ತಂಗಡಿ, ಸುಳ್ಯ, ಪುತ್ತೂರು ಭಾಗದಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗಿರುವುದು ವರದಿಯಾಗಿದೆ.
ಉತ್ತಮ ಮಳೆ ಸಾಧ್ಯತೆಯಿರುವುದರಿಂದ ಹವಾಮಾನ ಇಲಾಖೆ ಮಂಗಳವಾರವೂ ಆರೆಂಜ್ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮಳೆ ಆರಂಭವಾಗಿದ್ದು, ಸಾಧಾರಣ ಮಳೆಯಾಗಿದೆ. ಮಂಗಳೂರು, ಸುಳ್ಯ, ಬಂಟ್ವಾಳ, ಪುತ್ತೂರು ಮಧ್ಯಾಹ್ನ ಹಾಗೂ ಸಂಜೆ ವೇಳೆ ಅಲ್ಪ ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.
*ಜು.26ರವರೆಗೂ ಉತ್ತಮ ಮಳೆ
ಜು.22ರಿಂದ ಜು.25ರ ತನಕ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಜು.26ರವರೆಗೂ ದ.ಕ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರವಿವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 25 ಮಿ.ಮೀ ಮಳೆ ದಾಖಲಾಗಿದೆ. ಬೆಳ್ತಂಗಡಿ 27 ಮಿ.ಮೀ, ಬಂಟ್ವಾಳ 35.3 ಮಿಮೀ, ಮಂಗಳೂರು 35.3 ಮಿಮೀ, ಪುತ್ತೂರು 32.7 ಮಿ.ಮೀ, ಸುಳ್ಯ 40.3 ಮಿ.ಮೀ, ಮೂಡುಬಿದರೆ 50.3 ಮಿಮೀ, ಕಡಬ 25.9 ಮಿ.ಮೀ, ಮುಲ್ಕಿ 26.8 ಮಿ.ಮೀ ಮತ್ತು ಉಳ್ಳಾಲದಲ್ಲಿ 31.8 ಮಿಮೀ ಮಳೆಯಾಗಿದೆ.
*ಮೀನುಗಾರರಿಗೆ ಎಚ್ಚರಿಕೆ: ಗಾಳಿಯ ವೇಗ ಹೆಚ್ಚಿರುವುದರಿಂದ ಕಡಲತೀರ ನಿವಾಸಿಗಳಿಗೆ ಎಚ್ಚರಿಕೆ ಯಿಂದ ಇರುವಂತೆ ಸೂಚಿಸಲಾಗಿದೆ. ಜುಲೈ 27ರವರೆಗೆ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ.







