ಕಾಳಾವರದಲ್ಲಿ ಪಿಕ್‌ಅಪ್ ಮೇಲೆ ಬಿದ್ದ ಮರ, ಜನ ವಾಹನಕ್ಕೆ ಕಂಟಕ
ಕೋಟೇಶ್ವರ-ಹಾಲಾಡಿ ರಸ್ತೆಗೆ ವಾಲಿಕೊಂಡ ಬೃಹತ್ ಗಾತ್ರದ ಮರಗಳು

ಕುಂದಾಪುರ, ಜು.25: ತಾಲೂಕಿನ ಕೋಟೇಶ್ವರ ಮೂಲಕವಾಗಿ ಹಾಲಾಡಿ ಸಂಪರ್ಕದ ಜಿಲ್ಲಾ ಪ್ರಮುಖ ರಸ್ತೆಯಲ್ಲಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಗೆ ವಾಲಿಕೊಂಡಿದ್ದು ವಾಹನ ಸವಾರರು ಹಾಗೂ ಪಾದಾಚಾರಿಗಳು ಜೀವ ಭೀತಿಯ ನಡುವೆ ಇಲ್ಲಿ ಸಂಚರಿಸಬೇಕಾದ ಸ್ಥಿತಿ ಇದೆ.
ಈ ಮರಗಳಿಂದ ಕಾಗೇರಿ, ಕಟ್ಕೇರಿ, ಕಾಳಾವರ, ಸಳ್ವಾಡಿ ಸಹಿತ ಪ್ರಮುಖ ರಸ್ತೆಯ ಉದ್ದಕ್ಕೂ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೋಟೇಶ್ವರ-ಹಾಲಾಡಿ ರಸ್ತೆಯು ಪ್ರಮುಖ ಮುಖ್ಯ ರಸ್ತೆಯಾಗಿದ್ದು ಅಮಾಸೆಬೈಲು ಹಾಗೂ ಶಂಕರನಾರಾಯಣ ಸಂಪರ್ಕ ಒಂದೆಡೆಯಾದರೆ, ಹಾಲಾಡಿ ಮೂಲಕ ಬೆಳ್ವೆ-ಆಗುಂಬೆ-ಶಿವಮೊಗ್ಗ ಹಾಗೂ ಇನ್ನೊಂದೆಡೆ ಹೆಬ್ರಿ-ಕಾರ್ಕಳ ಸಂಚಾರಕ್ಕೆ ರಹದಾರಿಯಾಗಿದೆ.
ಪ್ರತಿವರ್ಷ ಮಳೆಗಾಲ ಸಹಿತ ಜೋರಾದ ಗಾಳಿ-ಮಳೆ ಬಂದರೆ ಇಲ್ಲಿನ ರಸ್ತೆಯಲ್ಲಿ ಮರಗಳು ಬೀಳು ವುದು, ರೆಂಬೆ-ಕೊಂಬೆಗಳು ಬೀಳುವುದು ಸಾಮಾನ್ಯವಾಗಿದ್ದು ಹಲವು ಬಾರಿ ಸಮಸ್ಯೆಯಾಗಿ ಕಾಡಿದೆ.
ಗುರುವಾರ ಜು. 24ರ ಬೆಳಿಗ್ಗೆ ಕಾಳಾವರದ ಕಟ್ಕೇರಿ ಸಮೀಪ ಪಿಕ್‌ಅಪ್ ಮೇಲೆ ಮರ ಬಿದ್ದು ದುಡಿಮೆಗಾಗಿ ಹೊರಟಿದ್ದವರ ವಾಹನ ಭಾಗಶಃ ನಜ್ಜುಗುಜ್ಜಾಗಿದೆ. ನಿತ್ಯ ಇಂತಹ ಘಟನೆಗಳು ನಡೆಯುತ್ತಿದ್ದು ಸಂಬಂದಪಟ್ಟ ಇಲಾಖೆ, ಜನಪ್ರತಿನಿಧಿಗಳು ಸೂಕ್ತ ಕ್ರಮವಹಿಸಬೇಕು ಎಂದು ನಾಗರೀಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
"ಕೋಟೇಶ್ವರ-ಹಾಲಾಡಿ ಪ್ರಮುಖ ರಸ್ತೆಯಲ್ಲಿ ಹಲವಾರು ಬೃಹತ್ ಗಾತ್ರದ ಮರಗಳು ರಸ್ತೆಗೆ ಚಾಚಿ ಕೊಂಡಿದ್ದು ಅಪಾಯದ ಸಾಧ್ಯತೆಗಳಿದೆ. ಜೋರು ಗಾಳಿ-ಮಳೆ ಬಂದರೆ ಮರ ಬೀಳುವುದು, ರೆಂಬೆ-ಕೊಂಬೆಗಳು ಬಿದ್ದು ಹಲವರಿಗೆ ಸಮಸ್ಯೆಗಳಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಪಘಾತಕ್ಕೆ ಕಾರಣವಾಗದಂತೆ ಅರಣ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು".
-ಸುಧೀರ್ ಜಿ. ಕಾಳಾವರ, ಸಾಮಾಜಿಕ ಕಾರ್ಯಕರ್ತ.
"ಕುಂದಾಪುರ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ 28 ಗ್ರಾಮ ಪಂಚಾಯತಿಗಳು ಬರುತ್ತವೆ. ಅಪಾಯಕಾರಿ ಮರಗಳ ವಿಚಾರದಲ್ಲಿ ಗ್ರಾಪಂ ನೀಡಿದ ಮನವಿಗೆ ಆದ್ಯತೆ ನೆಲೆಯಲ್ಲಿ ಸ್ಪಂದನೆ ನೀಡುತ್ತಿದ್ದು ಕ್ರಮವಹಿಸ ಲಾಗುತ್ತಿದೆ. ಕುಂದಾಪುರ ನಗರ ಸಹಿತ ಈಗಾಗಲೇ 2-3 ತಂಡಗಳನ್ನು ರಚಿಸಿಕೊಂಡು ಗ್ರಾ.ಪಂ ವ್ಯಾಪ್ತಿಯಲ್ಲಿ ಹಲವೆಡೆ ಕಟಾವು ಕಾರ್ಯವೂ ನಡೆಸಲಾಗಿದ್ದು ಇನ್ನೂ ಕೆಲಸ ನಡೆಯುತ್ತಿದೆ. ಅತಿಯಾದ ಮಳೆ, ಕಾರ್ಮಿಕರ ಕೊರತೆ, ವಿದ್ಯುತ್ ತಂತಿ ಹಾದುಹೋಗಿರುವ ಕಡೆ ಸಹಿತ ಕೆಲವು ತಾಂತ್ರಿಕ ಕಾರಣದಿಂದ ಕಾರ್ಯಾಚರಣೆಯು ಒಂದಷ್ಟು ಕಡೆಗಳಲ್ಲಿ ಹಿನ್ನಡೆಯಾಗಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುತ್ತದೆ".
-ರಾಘವೇಂದ್ರ ನಾಯ್ಕ್ , ಕುಂದಾಪುರ ವಲಯ ಅರಣ್ಯಾಧಿಕಾರಿ.







